ಅಹಮದಾಬಾದ್: ಹಸುವಿನ ಸಗಣಿಯಲ್ಲಿ ಕೋವಿಡ್–19 ನಿವಾರಿಸುವ ಗುಣ ಹೊಂದಿದೆ ಎಂಬ ನಂಬಿಕೆ ಕೆಲವರಲ್ಲಿದ್ದು, ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವುದರ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸಗಣಿ ಬಳಕೆಯಿಂದ ಕೊರೊನಾ ವೈರಸ್ ಸೋಂಕನ್ನು ಹೋಗಲಾಡಿಸಬಹುದು ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ. ಸಗಣಿಯ ಬಳಕೆಯಿಂದ ಕೋವಿಡ್–19 ನಿವಾರಣೆಯಾಗುವ ಬದಲು ಇತರ ರೋಗಗಳು ಹರಡುವ ಸಾಧ್ಯತೆಗಳೇ ಹೆಚ್ಚು ಎಂದೂ ಎಚ್ಚರಿಸಿದ್ದಾರೆ.
ಗುಜರಾತ್‌ನ ಕೆಲವೆಡೆ ಜನರು ವಾರದಲ್ಲಿ ಒಂದು ಬಾರಿ ಗೋಶಾಲೆಗಳಿಗೆ ಹೋಗುತ್ತಿದ್ದು, ಮೈಗೆಲ್ಲ ಸಗಣಿ ಹಾಗೂ ಗೋಮೂತ್ರ ಸವರಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಜನರು ಗೋಶಾಲೆಗಳಿಗೆ ತೆರಳಿ, ಸಗಣಿ ಹಾಗೂ ಗೋಮೂತ್ರವನ್ನು ಮೈಗೆ ಹಚ್ಚಿಕೊಳ್ಳುತ್ತಿರುವುದು, ಕೆಲವರು ಅದರಿಂದಲೇ ಸ್ನಾನ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಗುಜರಾತ್‌ನ ಅಹಮದಾಬಾದ್ ಬಳಿಯ ಛರೋಡಿ ಎಂಬಲ್ಲಿ ಶ್ರೀ ಸ್ವಾಮಿ ನಾರಾಯಣ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾನ ಇದ್ದು, ಇದು ಗೋಶಾಲೆಯೊಂದನ್ನು ನಡೆಸುತ್ತಿದೆ. ಇಲ್ಲಿಗೆ ಸಾಕಷ್ಟು ಜನರು ಭೇಟಿ ನೀಡುತ್ತಿದ್ದಾರೆ.
ಕೋವಿಡ್–19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಝೈಡಸ್–ಕ್ಯಾಡಿಲಾ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಗೌತಮ್ ಮಣಿಲಾಲ್ ಬೋರಿಸಾ ಅವರೂ ಈ ಗೋಶಾಲೆಗೆ ಭೇಟಿ ನೀಡಿ, ಸಗಣಿ–ಗೋಮೂತ್ರದ ಚಿಕಿತ್ಸೆ ಪಡೆದಿದ್ದಾರೆ.
‘ಈ ಗೋಶಾಲೆಗೆ ವೈದ್ಯರು ಸೇರಿದಂತೆ ಸಾಕಷ್ಟು ಜನರು ಬರುತ್ತಾರೆ. ಸಗಣಿ–ಗೋಮೂತ್ರ ಬಳಸಿ ನೀಡುವ ಚಿಕಿತ್ಸೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಂತರ ನಾವು ಯಾವುದೇ ಹೆದರಿಕೆ ಇಲ್ಲದೆ ಕೋವಿಡ್ ರೋಗಿಗಳ ಬಳಿ ತೆರಳಿ ಅವರಿಗೆ ಚಿಕಿತ್ಸೆ ನೀಡಬಹುದು ಎಂಬ ನಂಬಿಕೆ ಅವರಲ್ಲಿದೆ’ ಎಂದು ಗೌತಮ್ ಹೇಳಿದರು.
‘ಕಳೆದ ವರ್ಷ ನನಗೂ ಕೊರೊನಾ ಸೋಂಕು ತಗುಲಿತ್ತು. ನಾನೂ ಸಗಣಿ–ಗೋಮೂತ್ರ ಚಿಕಿತ್ಸೆ ಪಡೆದೆ. ಕೋವಿಡ್‌ನಿಂದ ಚೇತರಿಸಿಕೊಳ್ಳಲು ಈ ಚಿಕಿತ್ಸೆ ನೆರವಾಯಿತು’ ಎಂದೂ ಅವರು ಹೇಳಿದರು.
‘ಸಗಣಿ, ಗೋಮೂತ್ರ ಬಳಕೆಯಿಂದ ರೋಗ ನಿರೋಧಶಕ್ತಿ ಹೆಚ್ಚುತ್ತದೆ ಎಂಬ ಕುರಿತು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ನಂಬಿಕೆ ಮಾತ್ರ’ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದರು.
‘ಸಗಣಿ, ಗೋಮೂತ್ರದಿಂದ ಮಾಡಿದ ಉತ್ಪನ್ನಗಳ ವಾಸನೆ ತೆಗೆದುಕೊಳ್ಳುವುದರಿಂದ ಇಲ್ಲವೇ ಅವುಗಳನ್ನು ಸೇವಿಸುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದೂ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.