ADVERTISEMENT

ಉಜ್ಬೇಕ್‌ ಮಕ್ಕಳ ಸಾವು ಪ್ರಕರಣ: ಸಿರಪ್‌ ಉತ್ಪಾದನೆ ನಿಲ್ಲಿಸಿದ ಭಾರತದ ಔಷಧ ಕಂಪನಿ

ಐಎಎನ್ಎಸ್
Published 29 ಡಿಸೆಂಬರ್ 2022, 10:44 IST
Last Updated 29 ಡಿಸೆಂಬರ್ 2022, 10:44 IST
‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಹೊರಗೆ ಪೊಲೀಸರ ಭದ್ರತೆ
‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಹೊರಗೆ ಪೊಲೀಸರ ಭದ್ರತೆ    

ನೊಯಿಡಾ: ಭಾರತೀಯ ಔಷಧ ಕಂಪನಿ ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಕೆಮ್ಮಿನ ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಉತ್ಪಾದಿಸಿದ ‘ಡಾಕ್‌ 1 ಮ್ಯಾಕ್ಸ್‌’ ಸೇವನೆ ಬಳಿಕ ದೇಶದಲ್ಲಿ ಕನಿಷ್ಠ 18 ಮಕ್ಕಳು ಮೃತಪಟ್ಟಿರುವುದಾಗಿ ಉಜ್ಬೇಕಿಸ್ತಾನ ಸರ್ಕಾರ ಬುಧವಾರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ಔಷಧ ತಯಾರಿಕೆಯನ್ನು ನಿಲ್ಲಿಸಿದೆ.

ಸಂಸ್ಥೆಯ ನೊಯಿಡಾ ಘಟಕವನ್ನು ಉತ್ತರ ಪ್ರದೇಶ ಔಷಧ ನಿಯಂತ್ರಣ ಇಲಾಖೆ ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (ಸಿಡಿಎಸ್‌ಸಿಒ) ತಂಡಗಳು ಪರಿಶೀಲನೆ ನಡೆಸಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನದ ರಾಷ್ಟ್ರೀಯ ಔಷಧ ನಿಯಂತ್ರಕದೊಂದಿಗೆ ಸಿಡಿಎಸ್‌ಸಿಒ ಸಂಪರ್ಕದಲ್ಲಿದೆ.

‘ಉಜ್ಬೇಕಿಸ್ತಾನದ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಔಷಧ ಕಂಪನಿಯ ನೊಯಿಡಾ ಘಟಕವನ್ನು ಉತ್ತರ ಪ್ರದೇಶದ ಔಷಧ ನಿಯಂತ್ರಕರು ಮತ್ತು ಸಿಡಿಎಸ್‌ಸಿಒ ತಂಡಗಳು ಪರಿಶೀಲಿಸಿವೆ. ವರದಿ ಬಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ.

ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಉತ್ಪಾದನಾ ಘಟಕದಿಂದ ಸಂಗ್ರಹಿಸಲಾಗಿದೆ. ಅವುಗಳನ್ನು ಪರೀಕ್ಷೆಗಾಗಿ ಚಂಡೀಗಢದ ಪ್ರಾದೇಶಿಕ ಔಷಧ ಪ್ರಯೋಗಾಲಯಕ್ಕೆ (ಆರ್‌ಡಿಟಿಎಲ್‌) ಕಳುಹಿಸಲಾಗಿದೆ.

ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿರುವುದಾಗಿಯೂ, ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿಯೂ ‘ಮೇರಿಯನ್ ಬಯೋಟೆಕ್’ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.