ಮೇರಠ್ (ಪಿಟಿಐ): ಬೇಹುಗಾರಿಕೆ ಆರೋಪದಡಿ ಈಚೆಗೆ ಬಂಧಿಸಿರುವ ರಷ್ಯಾದಲ್ಲಿರುವ ಭಾರತದ ರಾಯಭಾರ ಕಚೇರಿಯ ನೌಕರನನ್ನು ಮಹಿಳೆಯೊಬ್ಬರು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದರು ಎಂದು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸಿರುವ ಆರೋಪದಲ್ಲಿ ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಶಾ ಮೊಹಿಯುದ್ದೀನ್ ಗ್ರಾಮದ ಸತೇಂದ್ರ ಸಿವಾಲ್ ಎಂಬಾತನನ್ನು ಎಟಿಎಸ್ ಅಧಿಕಾರಿಗಳು ಈಚೆಗೆ ಬಂಧಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಸತೇಂದ್ರನಿಗೆ ಪೂಜಾ ಮೆಹ್ರಾ ಎಂಬವರ ಪರಿಚಯವಾಗಿತ್ತು. ಆ ಮಹಿಳೆ ಈತನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದರು ಎಂದು ಎಟಿಎಸ್ ಇನ್‌ಸ್ಪೆಕ್ಟರ್ ರಾಜೀವ್ ತ್ಯಾಗಿ ತಿಳಿಸಿದರು.
ಸತೇಂದ್ರ ಸೋರಿಕೆ ಮಾಡಿರುವ ದಾಖಲೆಗಳು ಆತನ ಮೊಬೈಲ್‌ನಲ್ಲಿದ್ದು, ಅದನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಮಹಿಳೆಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಯು ನಿರ್ವಹಣೆ ಮಾಡುತ್ತಿದ್ದು, ಹಣ ನೀಡಿ ದಾಖಲೆಗಳನ್ನು ಪಡೆಯಲಾಗುತ್ತಿತ್ತು ಎಂದಿದ್ದಾರೆ.
ವಾಯುಪಡೆಯ ವಿಮಾನಗಳು, ನೌಕಾಪಡೆಯ ಜಲಾಂತರ್ಗಾಮಿಗಳು ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿರುವ ರಹಸ್ಯ ದಾಖಲೆಗಳನ್ನು ಸತೇಂದ್ರ ಸೋರಿಕೆ ಮಾಡುತ್ತಿದ್ದ ಎಂದು ಆರೋಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.