ನವದೆಹಲಿ: ಚೀನಾದ ಆಕ್ರಮಣಕಾರಿ ಚಟುವಟಿಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆಗಡಿಯುದ್ದಕ್ಕೂ ನಿಯೋಜನೆಗೊಂಡಿರುವ ಭಾರತೀಯ ಸೇನೆಗೆ ಸೂಚಿಸಲಾಗಿದ್ದು, ಸೇನೆಗೆ ‘ಸಂಪೂರ್ಣ ಸ್ವಾತಂತ್ರ್ಯ’ವನ್ನು ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್‌ನ ಪರಿಸ್ಥಿತಿ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಯ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಉನ್ನತ ಮಟ್ಟದ ಸಭೆ ಬಳಿಕ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ, ನೌಕಾ ಮುಖ್ಯಸ್ಥ ಅಡ್ಮಿರಲ್ ಕರಮಬೀರ್ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್‌ಎಸ್‌ಕೆ ಭದೌರಿಯಾ ಇದ್ದರು.
ಚೀನಾ ಗಡಿಯುದ್ಧಕ್ಕೂ ಕಠಿಣ ಕಣ್ಗಾವಲು ನೀತಿ ಅಳವಡಿಸಿಕೊಳ್ಳುವಂತೆ ಮೂರೂ ಪಡೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಚೀನಾ ಪಡೆಗಳ ಪ್ರಚೋದನಾತ್ಮಕ ವರ್ತನೆಗಳಿಗೆ ಕಠಿಣ ಉತ್ತರವನ್ನೇ ನೀಡುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾ ಸೇನೆಯಿಂದ ಎದುರಾಗಬಹುದಾದ ಎಲ್ಲ ಅಪಾಯಗಳನ್ನು ಎದುರಿಸಿಲು ಸೇನೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ವಾಯುಪಡೆ ಕೂಡಾ ಕಾರ್ಯಚರಣೆ ನಡೆಸಲು ಪೂರ್ವ ಲಡಾಖ್‌ನ ಆಯಕಟ್ಟಿನ ಜಾಗಗಳನ್ನು ಗುರುತಿಸಿ ಸಮರಕ್ಕೆ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.