ನವದೆಹಲಿ: ಇರಾನ್ ಹಾಗೂ ಇಸ್ರೇಲ್ ನಡುವೆ ಸಂಬಂಧ ತೀರಾ ಹದಗೆಟ್ಟಿದ್ದು, ಯುದ್ಧದ ಭೀತಿಯನ್ನು ಉಭಯ ರಾಷ್ಟ್ರಗಳ ಪ್ರಜೆಗಳು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದೆ.
‘ಇರಾನ್ ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯರು ತಮ್ಮ ಸುರಕ್ಷತೆಯ ಖಾತ್ರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಹೊರಗೆ ತಿರುಗಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂದಿದೆ.
ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ನಡೆಸಿ, ಕಾನ್ಸುಲರ್ ಅನೆಕ್ಸ್ ಅನ್ನು ನೆಲಸಮಗೊಳಿಸಿದೆ ಎಂದು ಇರಾನ್ ಆರೋಪಿಸಿತ್ತು. ದಾಳಿಯಿಂದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ (ಐಆರ್‌ಜಿಸಿ) ಏಳು ಮಂದಿ ಸಿಬ್ಬಂದಿ ಮತ್ತು ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಶಪಥ ಮಾಡಿತ್ತು. ಹೀಗಾಗಿ ಇಸ್ರೇಲ್‌ನ ರಾಯಭಾರ ಕಚೇರಿಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ’ ಎಂದು ಇರಾನ್‌ನ ಪರಮೋಚ್ಚ ನಾಯಕ ಅಯತುಲ್ಲಾ ಅಲಿ ಖಮೇನಿ ಅವರು ಹೇಳಿದ್ದರು.
‘ದಾಳಿ ನಡೆಸುವುದಕ್ಕೆ ನಮ್ಮ ಪಡೆಗಳು ಸಿದ್ಧವಾಗಿವೆ. ಅವು ಹೇಗಿರುತ್ತವೆ ಎಂಬುದನ್ನು ನೀವು ಕಾದು ನೋಡಬೇಕು. ಕ್ರೂರ ಇಸ್ರೇಲ್ ದೇಶವನ್ನು ಎದುರಿಸುವುದು ಶಾಸನಬದ್ಧ ಮತ್ತು ನ್ಯಾಯಸಮ್ಮತ ಹಕ್ಕಾಗಿದೆ. ನಮ್ಮ ಸುತ್ತಮುತ್ತಲ ಪ್ರಾಂತ್ಯಗಳ ಇಸ್ರೇಲ್ ರಾಯಭಾರ ಕಚೇರಿಗಳನ್ನು ಪ್ರಸ್ತುತ ಮುಚ್ಚಲಾಗಿದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.