ನವದೆಹಲಿ: ಸಮರ್ಪಕವಾದ ಪೂರ್ವ ಸಿದ್ಧತೆ ಇಲ್ಲದೆ ‘ರಾಷ್ಟ್ರೀಯ ನಿರ್ಗಮನ ಪರೀಕ್ಷೆ’ (ನೆಕ್ಸ್ಟ್) ಅನುಷ್ಠಾನ ಸರಿಯಲ್ಲ ಎಂದು ಭಾರತೀಯ ವೈದ್ಯಕೀಯ ಸಂಘವು (ಐಎಂಎ) ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪತ್ರ ಬರೆದಿದೆ.
ವೈದ್ಯಕೀಯ ಶಿಕ್ಷಣದ ಕೈಗೆಟುಕುವಿಕೆ ಮತ್ತು ಪ್ರವೇಶಕ್ಕೆ ‘ನೆಕ್ಸ್ಟ್’ ಅಪಾಯಕಾರಿಯಾಗಿದೆ. ಅಲ್ಲದೆ ಈ ಸಂಬಂಧ ಕೆಲ ನಿಬಂಧನೆಗಳನ್ನು ಮರು ಪರಿಶೀಲಿಸುವ ಅಗತ್ಯವೂ ಇದೆ ಅದು ಪ್ರಸ್ತಾಪಿಸಿದೆ.
‘ನೆಕ್ಸ್ಟ್’ ಅನುಷ್ಠಾನ ಮತ್ತು ಅದರ ತಯಾರಿ ಕುರಿತು ಫೆ. 7ರೊಳಗೆ ಪ್ರತಿಕ್ರಿಯಿಸುವಂತೆ ಎನ್‌ಎಂಸಿ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಿತ್ತು. ಅದರಂತೆ ಪತ್ರ ಬರೆದಿರುವ ಐಎಂಎ, ‘ವೈದ್ಯಕೀಯ ಶಿಕ್ಷಣವು ಕೈಗೆಟಕುವಂತಿರಬೇಕು ಎಂಬುದು ಪ್ರಧಾನಿ ಅವರ ಆಶಯ. ಆದರೆ ‘ನೆಕ್ಸ್ಟ್’ ಪರೀಕ್ಷೆಯು ಪ್ರಧಾನಿ ಅವರ ಈ ಆಶಯಕ್ಕೆ ಪೂರಕವಾಗಿಲ್ಲ’ ಎಂದು ಹೇಳಿದೆ.
‘ಪ್ರಸ್ತುತ ದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಏಕರೂಪ ಮಾನದಂಡಗಳಿಲ್ಲ. ಅಲ್ಲದೆ ಇಡೀ ದೇಶವನ್ನು ಒಂದು ಪರೀಕ್ಷೆಯೊಂದಿಗೆ ಜೋಡಿಸುವುದು ಕಾರ್ಯಸಾಧುವಲ್ಲ’ ಎಂದು ಅದು ತಿಳಿಸಿದೆ.
‘ವೈದ್ಯಕೀಯ ವೃತ್ತಿ ಆರಂಭಿಸಲು ಅಗತ್ಯವಿರುವ ಪರವಾನಗಿಗೆ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಒಂದೇ ಪರೀಕ್ಷೆ ನಡೆಸುವುದು ಪೂರ್ಣವಾಗಿ ತರ್ಕಬದ್ಧವಲ್ಲ’ ಎಂದು ಅದು ಹೆಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.