ಮುಂಬೈ: ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಚೀನಾದ ಕನಿಷ್ಠ 40 ಯೋಧರು ಮೃತಪಟ್ಟಿರಬಹುದು ಎಂದು ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಹೇಳಿದ್ದಾರೆ.
ಭಾರತದ 20 ಸೈನಿಕರು ಹುತಾತ್ಮರಾಗಿರುವ ಈ ಘರ್ಷಣೆಯಲ್ಲಿ ತನ್ನ ದೇಶದ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಈವರೆಗೆ ಮಾಹಿತಿ ನೀಡಿಲ್ಲ.
‘ನಮ್ಮ ಕಡೆ 20 ಸೈನಿಕರಿಗೆ ಸಾವುನೋವು ಸಂಭವಿಸಿದ್ದರೆ, ಆ ಕಡೆ ಅದರ ಪ್ರಮಾಣ ದುಪ್ಪಟ್ಟು ಇರುವ ಸಾಧ್ಯತೆಯಿದೆ’ ಎಂದು ಸಿಂಗ್ ಟಿವಿ ನ್ಯೂಸ್ 24 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮಾಜಿ ಸೇನಾ ಮುಖ್ಯಸ್ಥರೂ ಆಗಿರುವ ಸಿಂಗ್, ತಮ್ಮ ಹೇಳಿಕೆಯನ್ನು ಪುಷ್ಟೀಕರಿಸುವ ಯಾವ ಪುರಾವೆಗಳನ್ನೂ ನೀಡಿಲ್ಲ. ‘1962ರ ಯುದ್ಧ ಸೇರಿದಂತೆ ಚೀನಾ ದೇಶವು ಯಾವ ಸಂಘರ್ಷದಲ್ಲೂ ಸಾವುನೋವಿನ ಮಾಹಿತಿಯನ್ನು ಪ್ರಕಟಿಸಿದ ಉದಾಹರಣೆಯೇ ಇಲ್ಲ’ ಎಂದಿದ್ದಾರೆ.
ಭಾರತದ ಭೂ ಪ್ರದೇಶದೊಳಗೆ ಬಂದಿದ್ದ ಚೀನಾ ಸೈನಿಕರನ್ನು ಅವರಿಗೆ ಹಸ್ತಾಂತರ ಮಾಡಲಾಗಿದೆ ಎಂದಿದ್ದಾರೆ. ಆದರೆ ಸಿಂಗ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವರ ವಕ್ತಾರ ಭರತ್ ಭೂಷಣ್ ಬಾಬು ನಿರಾಕರಿಸಿದ್ದಾರೆ.
ಚೀನಾದ ಕಡೆಯೂ ಸಾವುನೋವು ಸಂಭವಿಸಿವೆ ಎಂದು ಚೀನಾ ಸರ್ಕಾರಿ ನಿಯಂತ್ರಿತ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಆದರೆ ಆ ಪ್ರಮಾಣ ಎಷ್ಟು ಎಂದು ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.