ಕೊಚ್ಚಿ:ಹಾಯಿದೋಣಿಯಲ್ಲಿ ಒಬ್ಬಂಟಿಯಾಗಿ ಭೂಮಿ ಸುತ್ತುವ ಸ್ಪರ್ಧೆ ವೇಳೆ ಗಾಯಗೊಂಡು ಸಮುದ್ರದ ಮಧ್ಯದಲ್ಲಿ ಸಿಲುಕಿರುವ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ ಅವರನ್ನು ಪತ್ತೆ ಮಾಡಲಾಗಿದೆ ಎಂದು ನೌಕಾಪಡೆ ಮೂಲಗಳು ಹೇಳಿವೆ.
ಗೋಲ್ಡನ್ ಗ್ಲೋಬ್ ಸ್ಪರ್ಧೆಯಲ್ಲಿ ಭಾರತವನ್ನು ಸ್ಪರ್ಧಿಸುತ್ತಿರುವ ಟಾಮಿ ಅವರ ದೋಣಿಯ ಹಾಯಿಕಂಬ ಮುರಿದು ಅವರು ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಸಿಲುಕಿದ್ದಾರೆ. ಬಿರುಗಾಳಿ ಮತ್ತು ಭಾರಿ ಅಲೆಗಳು ಏಳುತ್ತಿರುವುದರಿಂದ ಈ ಅವಘಡ ಸಂಭವಿಸಿತ್ತು.
‘ಬೆನ್ನಿಗೆ ತೀವ್ರವಾದ ಗಾಯವಾಗಿರುವುದರಿಂದ ಅಲುಗಾಡಲೂ ಆಗುತ್ತಿಲ್ಲ’ ಎಂದು ಅವರು ಸಂದೇಶ ರವಾನಿಸಿದ್ದರು.ಕನ್ಯಾಕುಮಾರಿಯಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 5,200 ಕಿ.ಮೀ. ದೂರದಲ್ಲಿ ಅವರ ದೋಣಿ ಸಿಲುಕಿಕೊಂಡಿದೆ.ಅವರ ರಕ್ಷಣೆಗೆ ಹಲವು ಯುದ್ಧನೌಕೆಗಳು ಧಾವಿಸುತ್ತಿವೆ. ಆದರೆ ಆ ಸ್ಥಳವನ್ನು ಇನ್ನಷ್ಟೇ ಅವು ತಲುಪಬೇಕಿದೆ.
ನೌಕಾಪಡೆಯ ವಿಮಾನವೊಂದು ಮಾರಿಷಸ್‌ನಿಂದ ಹೊರಟು ಟಾಮಿ ಅವರ ದೋಣಿಯನ್ನು ಪತ್ತೆ ಮಾಡಿದೆ. ಅವರು ಸುರಕ್ಷಿತವಾಗಿರುವುದನ್ನು ವಿಮಾನದ ಪೈಲಟ್‌ಗಳು ಖಾತರಿಪಡಿಸಿಕೊಂಡಿದ್ದಾರೆ. ಭಾರಿ ಅಲೆ ಮತ್ತು ಬಿರುಗಾಳಿ ಇರುವ ಕಾರಣ ಹಡಗುಗಳು ಬಂದರೆ ಮಾತ್ರ ಟಾಮಿ ಅವರನ್ನು ರಕ್ಷಿಸಲು ಸಾಧ್ಯ ಪೈಲಟ್‌ಗಳು ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.