ನವದೆಹಲಿ: ‘ಭಾರತೀಯ ನೌಕಾಪಡೆ ನಡೆಸಿದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಯಶಸ್ವಿಯಾಗಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
‘ಭಾರತೀಯ ನೌಕಾಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ, ಸ್ವದೇಶಿ ನಿರ್ಮಿತ ಕ್ಷಿಪಣಿ ನಾಶಕ ಯುದ್ಧನೌಕೆ ಐಎನ್‌ಎಸ್ ಮರ್ಮುಗಾವೊ ಮೂಲಕ ಇದೇ ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆ ಮಾಡಿದ್ದು, ಅದು ನಿಖರವಾಗಿ ದಾಳಿ ನಡೆಸಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ದೇಶವು ಆತ್ಮನಿರ್ಭರತೆ ಸಾಧಿಸುತ್ತಿರುವುದರ ದ್ಯೋತಕವಾಗಿದೆ. ನೌಕಾಪಡೆಯ ಶಕ್ತಿಯನ್ನೂ ಅನಾವರಣಗೊಳಿಸಿದೆ’ ಎಂದು ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ.
ನೌಕಾಪಡೆಯು ಯಾವ ಸ್ಥಳದಿಂದ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದೆ ಎಂಬುದು ಗೊತ್ತಾಗಿಲ್ಲ.
ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಸೂಪರ್ ಸಾನಿಕ್ ಕ್ಷಿಪಣಿಗಳು ಶಬ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಸಬ್‌ಮರಿನ್, ಹಡಗುಗಳು, ವಿಮಾನಗಳ ಮೂಲಕ ಉಡಾವಣೆ ಮಾಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.