ಸ್ಟಾಕ್‌ಹೋಂ: ಭಾರತದ ‘ಲೈಫ್‘(ಲೀಗಲ್ ಇನಿಶಿಯೇಟಿವ್ ಫಾರ್ ಫಾರೆಸ್ಟ್ ಅಂಡ್ ಎನ್ವಿರಾನ್ಮೆಂಟ್) ಸಂಸ್ಥೆ ಸೇರಿದಂತೆ ಮೂವರು ಪರಿಸರ, ಸಾಮಾಜಿಕ ಕಾರ್ಯಕರ್ತರು ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ರೈಟ್ ಲೈವ್ಲಿಹುಡ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಪರ್ಯಾಯನೊಬೆಲ್‘ ಪ್ರಶಸ್ತಿ ಎಂದೇ ಕರೆಯುವ ‘ರೈಟ್ ಲೈವ್ಲಿಹುಡ್‘ ಪುರಸ್ಕಾರವನ್ನು ಈ ಬಾರಿ ದೆಹಲಿ ಮೂಲದ ‘ಲೈಫ್‘ ಸಂಸ್ಥೆಯ ಜೊತೆಗೆ, ಕೆನಡಾದ ಸ್ಥಳೀಯ ಹಕ್ಕುಗಳ ಪ್ರಚಾರಕಿ ಫ್ರೆಡೆ ಹ್ಯೂಸನ್, ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಕೆಮರೂನ್ ದೇಶದ ವಾಂಡೌ ಹಾಗೂ ರಷ್ಯಾದ ಪರಿಸರ ಪ್ರಚಾರಕ ವ್ಲಾಡಿಮಿರ್ ಸ್ಲಿವ್ಯಾಕ್ ಅವರು ಹಂಚಿಕೊಂಡಿದ್ದಾರೆ.
‘ಮಕ್ಕಳ ರಕ್ಷಣೆಯಿಂದ ಹಿಡಿದು ಪರಿಸರ ರಕ್ಷಣೆಗಾಗಿ ವಿವಿಧ ಸಮುದಾಯಗಳನ್ನು ಬಲವರ್ಧನೆಗೊಳಿಸಲು ಶ್ರಮಿಸುತ್ತಿರುವ ಸಂಸ್ಥೆ ಮತ್ತು ಕಾರ್ಯಕರ್ತರನ್ನು ಈ ಬಾರಿಯ ರೈಟ್ ಲೈವ್ಲಿಹುಡ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ‘ ಎಂದು ಪುರಸ್ಕಾರ ನೀಡುವ ಸ್ವೀಡಿಷ್ ರೈಟ್ ಲೈವ್ಲಿಹುಡ್ ಫೌಂಡೇಶನ್ ತಿಳಿಸಿದೆ.
ನಾಲ್ವರು ಪ್ರಶಸ್ತಿ ಪುರಸ್ಕೃತರು ತಲಾ 10 ಲಕ್ಷ ಕ್ರೋನರ್(₹8.54 ಲಕ್ಷ) ಬಹುಮಾನ ಪಡೆಯಲಿದ್ದಾರೆ. ಡಿಸೆಂಬರ್ 1ರಂದು ನಡೆಯಲಿರುವ ವರ್ಚುವಲ್ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ‘ಲೈಫ್‘ ಸಂಸ್ಥೆ ಕಾನೂನು ಮತ್ತು ಕಾನೂನು ಪ್ರಕ್ರಿಯೆಗಳ ಸೃಜನಶೀಲ ಬಳಕೆಯ ಮೂಲಕ ಭಾರತದಲ್ಲಿ ಪರಿಸರ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ತಳಮಟ್ಟದ(ಗ್ರಾಸ್‌ರೂಟ್ಸ್) ವಿಧಾನಗಳ ಮೂಲಕ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ. ಪರಿಸರ ಮತ್ತು ಜೀವನೋಪಾಯ ರಕ್ಷಣೆ ವಿಷಯದಲ್ಲಿ ಪ್ರಬಲ ಹಿತಾಸಕ್ತಿಗಳ ವಿರುದ್ಧ ಹೋರಾಡುವುದಕ್ಕಾಗಿ ದುರ್ಬಲ ವರ್ಗದವರನ್ನು ಬಲವರ್ಧನೆಗೊಳಿಸಲು ಶ್ರಮಿಸುತ್ತಿದೆ. ಕಾನೂನುಗಳ ಸುಧಾರಣೆಗೆ ನೆರವಾಗುತ್ತಾ, ಸಂಸ್ಥೆಗಳನ್ನು ಬಲವರ್ಧನೆಗೊಳಿಸಲು ನೆರವಾಗುತ್ತಿದೆ.
ಪರಿಸರ ಕ್ಷೇತ್ರದ ಸಮಸ್ಯೆಗಳ ಕುರಿತು ಇತ್ಯರ್ಥಗೊಳಿಸುವುದಕ್ಕಿರುವ ಕಾನೂನಿನ ಕೊರತೆಯನ್ನು ಗಮನಿಸಿದ ವಕೀಲರಾದ ರಿತ್ವಿಕ್ ದತ್ತಾ ಮತ್ತು ರಾಹುಲ್ ಚೌಧರಿ ಅವರು 2005ರಲ್ಲಿ ಈ ಲೈಫ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ವಕೀಲರು ಇಂದು ಭಾರತದ ಪ್ರಮುಖ ಸಾರ್ವಜನಿಕ ಹಿತಾಸಕ್ತಿ ವಕೀಲರಲ್ಲಿ ಒಬ್ಬರಾಗಿದ್ದಾರೆ.
‘ಈ ಪ್ರಶಸ್ತಿ ನಮಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತೇಜಿಸುತ್ತದೆ. ಹೆಚ್ಚಿನ ಜನರನ್ನು ಪ್ರಕೃತಿ ಮತ್ತು ಜೀವನೋಪಾಯ ಕ್ರಮಗಳನ್ನು ರಕ್ಷಿಸುವ ಜನರ ಬಲವರ್ಧನೆಗೆ ಸಹಾಯವಾಗುತ್ತದೆ‘ ಎಂದು ‘ಲೈಫ್‘ ನ ಸಹ ಸಂಸ್ಥಾಪಕ ರಿತ್ವಿಕ್ ದತ್ತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.