ನ್ಯೂಯಾರ್ಕ್: ಭಾರತ ಸಂಜಾತೆ ಕ್ಯಾಪ್ಟನ್ ಪ್ರತಿಮಾ ಭುಲ್ಲಾರ್ ಮಲ್ಡೊನಾಡೊ ಅವರು ನ್ಯೂಯಾರ್ಕ್‌ನ ಪೊಲೀಸ್ ಇಲಾಖೆಯಲ್ಲಿ ಉನ್ನತ ಶ್ರೇಣಿಗೇರಿರುವ ದಕ್ಷಿಣ ಏಷ್ಯಾದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರತಿಮಾ ಅವರು ಈಚೆಗೆ ಕ್ಯಾಪ್ಟನ್ ಶ್ರೇಣಿಗೆ ಪದೋನ್ನತಿ ಪಡೆದಿದ್ದರು.
ಕ್ವೀನ್ಸ್ ಮತ್ತು ದಕ್ಷಿಣ ರಿಚ್ಮಂಡ್‌ಹಿಲ್ ನಗರಗಳಲ್ಲಿನ ಪೊಲೀಸ್ ಠಾಣೆಗಳು ಇವರ ಅಧೀನಕ್ಕೆ ಬರುತ್ತವೆ ಎಂದು ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ.
ಪಂಜಾಬ್‌ನಲ್ಲಿ ಜನಿಸಿರುವ ಪ್ರತಿಮಾ ಅವರು ತಮ್ಮ 9ನೇ ವಯಸ್ಸಿನಿಂದ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ನೆಲೆಸಿದ್ದಾರೆ. ಪ್ರತಿಮಾ ಅವರು ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ.
‘ಇದು ನನಗೆ ಸಿಕ್ಕಿರುವ ಬಹುದೊಡ್ಡ ಜವಾಬ್ದಾರಿ. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ವಿಶ್ವಾಸವಿದೆ. ನನ್ನ ತಂದೆ ಹಲವು ವರ್ಷಗಳ ಕಾಲ ಇಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿದಿದ್ದಾರೆ. ನಾನು ಪೊಲೀಸ್ ಇಲಾಖೆಗೆ ಸೇರುವ ಮುನ್ನವೇ 2006ರಲ್ಲಿ ಅವರು ತೀರಿಕೊಂಡಿದ್ದಾರೆ’ ಎಂದು ಪ್ರತಿಮಾ ಹೇಳಿದ್ದಾರೆ.
ದಕ್ಷಿಣ ರಿಚ್ಮಂಡ್ ಹಿಲ್ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ಸಿಖ್ ಸಮುದಾಯದವರು ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.