ಶ್ರೀನಗರ: ಪಾಕಿಸ್ತಾನದಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶನಿವಾರ ಪಾಕಿಸ್ತಾನ ಮತ್ತು ಭಾರತೀಯ ಸೇನಾ ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್‌ಧರ್ ಸೆಕ್ಟರ್‌ನಲ್ಲಿರುವ ಚಿಲೇಹಾನಾ ತಿತ್ವಾಲ್ ಕ್ರಾಸಿಂಗ್ ಪಾಯಿಂಟ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಸಿಹಿತಿಂಡಿಗಳನ್ನು ಪಾಕಿಸ್ತಾನದ ಸೈನಿಕರಿಗೆ ನೀಡಿ, ಶುಭ ಕೋರಿದರು.
‘ಭಾರತೀಯ ಸೇನೆಯು ಸಿಹಿಯನ್ನು ಉಡುಗೊರೆಯಾಗಿ ನೀಡಿತು. ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿ, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಕಾಪಾಡುವ ಇಚ್ಛೆಯನ್ನು ಪ್ರದರ್ಶಿಸಿತು’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ಪ್ರದೇಶದಲ್ಲಿ ಶಾಂತಿ ಕಾಪಾಡಲು ಈ ರೀತಿಯ ಸದ್ಭಾವನೆಯ ಮೂಲಕ ಭಾರತವು ಹಲವು ವರ್ಷಗಳಿಂದ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ನಿರಂತರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
‘ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಳ್ಳಿಗಳಲ್ಲಿ ಶಾಂತಿ ಕಾಪಾಡುವ ಭಾರತೀಯ ಸೇನೆಯ ಪ್ರಯತ್ನಗಳನ್ನು ಜನರು ಶ್ಲಾಘಿಸಿದ್ದಾರೆ. ಭಾರತೀಯ ಸೇನೆಯ ಈ ಸಕಾರಾತ್ಮಕ ಪ್ರಯತ್ನಗಳು ನಿಯಂತ್ರಣ ರೇಖೆಯ ಉದ್ದಕ್ಕೂ ಸುದೀರ್ಘ ಶಾಂತಿಗೆ ಕಾರಣವಾಗುತ್ತವೆ’ ಎಂದು ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.