ADVERTISEMENT

Indian Politics | ಮಹಾರಾಷ್ಟ್ರದ ಮುಂದಿನ CM ಬಿಜೆಪಿಯವರೇ ಆಗಬೇಕು: ಆರ್‌ಎಸ್‌ಎಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 9:27 IST
Last Updated 24 ನವೆಂಬರ್ 2024, 9:27 IST
<div class="paragraphs"><p>ಏಕನಾಥ ಶಿಂದೆ (ಮಧ್ಯದಲ್ಲಿ) ಮತ್ತು ದೇವೇಂದ್ರ ಫಡಣವೀಸ್‌ ಅವರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಅಜಿತ್‌ ಪವಾರ್‌ ಅವರನ್ನೂ ಕಾಣಬಹುದು</p></div>

ಏಕನಾಥ ಶಿಂದೆ (ಮಧ್ಯದಲ್ಲಿ) ಮತ್ತು ದೇವೇಂದ್ರ ಫಡಣವೀಸ್‌ ಅವರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಅಜಿತ್‌ ಪವಾರ್‌ ಅವರನ್ನೂ ಕಾಣಬಹುದು

   

ಮುಂಬೈ: ಮಹಾರಾಷ್ಟ್ರದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಪಕ್ಷದವರನ್ನೇ ಆಯ್ಕೆ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖಂಡರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.

ದೇಶದ ಶ್ರೀಮಂತ ರಾಜ್ಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿ ಪ್ರಚಂಡ ದಿಗ್ವಿಜಯ ಸಾಧಿಸಿದೆ. ಇದರ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ADVERTISEMENT

ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರು ಈ ಬಾರಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿ ಹಾಗೂ ಅದಕ್ಕೂ ಮೊದಲು ವಿರೋಧ ಪಕ್ಷದ ನಾಯಕರಾಗಿ ಅನುಭವ ಉಳ್ಳವರಾಗಿದ್ದಾರೆ.

ಸದ್ಯ ಮುಖ್ಯಮಂತ್ರಿ ಆಗಿರುವ ಏಕನಾಥ ಶಿಂದೆ ಅಲ್ಲದೆ, ಉಪ ಮುಖ್ಯಮಂತ್ರಿಯಾಗಿರುವ ಎನ್‌ಸಿಪಿಯ ಅಜಿತ್‌ ಪವಾರ್ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಬಾರಿಯೂ ಒಬ್ಬರು ಮುಖ್ಯಮಂತ್ರಿ, ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಬುಧವಾರದಂದು (ನ.20) ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶನಿವಾರ ಮತ ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 235 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇತ್ತ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 49 ಕ್ಷೇತ್ರ ಹಾಗೂ ಪಕ್ಷೇತರರು 4 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ–ಅಜಿತ್‌) ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಲೋಕಸಭಾ ಸಂಸದ ಸುನೀತ್ ತಟ್ಕರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮತ್ತು ಅವರ ಸಹೋದ್ಯೋಗಿ ಅನಿಲ್ ಪಾಟೀಲ್ ಅವರನ್ನು ಮುಖ್ಯ ಸಚೇತಕರನ್ನಾಗಿ ಮರು ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.