ADVERTISEMENT

ಅಭಿವೃದ್ಧಿಗಾಗಿ ಬಿಜೆಪಿಗೆ ಸ್ಪಷ್ಟ ಬಹುಮತ ಕೊಡಿ: ಪ್ರಧಾನಿ ಮೋದಿ

ಪಿಟಿಐ
Published 18 ಫೆಬ್ರುವರಿ 2024, 9:52 IST
Last Updated 18 ಫೆಬ್ರುವರಿ 2024, 9:52 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ‘ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ಗುರಿಯನ್ನು ಈಡೇರಿಸಲು ಭಾರಿ ಬಹುಮತದಿಂದ ಬಿಜೆಪಿಯು ಅಧಿಕಾರಕ್ಕೆ ಮರಳುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

‘ವಿಕಸಿತ ಭಾರತ ನಿರ್ಮಾಣ ಬಿಜೆಪಿಯಿಂದ ಮಾತ್ರವೇ ಸಾಧ್ಯ. ವಿರೋಧ ಪಕ್ಷಗಳಿಗೆ ಈ ಕುರಿತು ಸ್ಪಷ್ಟ ಕಾರ್ಯಸೂಚಿ ಇಲ್ಲವಾಗಿದೆ’ ಎಂದು ಭಾನುವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಮೋದಿ ಅಭಿಪ್ರಾಯಪಟ್ಟರು.

ADVERTISEMENT

11 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿರೋಧ ಪಕ್ಷಗಳ ವಿರುದ್ಧ, ಅದರಲ್ಲೂ ಮಖ್ಯವಾಗಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ‘ಕಾಂಗ್ರೆಸ್ ಪಕ್ಷ ಕೇವಲ ಹುಸಿ ಭರವಸೆಗಳನ್ನು ನೀಡುತ್ತಿದೆ. ಆದರೆ, ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಲು ನಿರ್ದಿಷ್ಟ ಕಾರ್ಯಸೂಚಿಯನ್ನೇ ಹೊಂದಿಲ್ಲ’ ಎಂದು ಟೀಕಿಸಿದರು.

‘ಸೈದ್ಧಾಂತಿಕ ಮತ್ತು ನೀತಿಗಳ ಆಧಾರದಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್‌ಗೆ ಧೈರ್ಯ ಇಲ್ಲವಾಗಿದೆ. ಕಾಂಗ್ರೆಸ್‌ ಪಕ್ಷ ಈಗ ನೈತಿಕತೆಯನ್ನು ಕಳೆದುಕೊಂಡಿದೆ. ಮೋದಿಯನ್ನು ಟೀಕಿಸುವುದು, ಆಧಾರರಹಿತ ಆರೋಪ ಮಾಡುವುದೇ ಆ ಪಕ್ಷದ ಮುಖಂಡರ ಒಂದಂಶದ ಕಾರ್ಯಕ್ರಮವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಈಗ ವಿರೋಧಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಆದರೆ, 400ರ ಗಡಿ ದಾಟುವುದಕ್ಕೆ ಪೂರಕವಾಗಿ ಬಿಜೆಪಿಯು 370 ಸ್ಥಾನ ಗೆಲ್ಲುವ ಮೈಲಿಗಲ್ಲು ದಾಟಬೇಕಾಗಿದೆ‘ ಎಂದರು.

‘ವಿಕಸಿತ ಭಾರತವನ್ನು ನಿರ್ಮಿಸಲು ನಾವು ಬೃಹತ್ ಹೆಜ್ಜೆ ಇಡಬೇಕಾಗಿದೆ. ಮುಂದಿನ ಐದು ವರ್ಷ ನಿರ್ಣಾಯಕವಾದುದು. ಬಿಜೆಪಿಯನ್ನು ಅಧಿಕಾರಕ್ಕೆ ಮರಳಿ ತರಲು ಕಾರ್ಯಕರ್ತರು ಮುಂದಿನ 100 ದಿನ ಹೆಚ್ಚು ವಿಶ್ವಾಸ ಮತ್ತು ಉತ್ಸಾಹದಿಂದ ಕೆಲಸ ಮಾಡಬೇಕಾಗಿದೆ’ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

‘ಈಗ ನಾನು ಮೂರನೇ ಬಾರಿಗೆ ಅಧಿಕಾರ ಕೇಳುತ್ತಿರುವುದು ಅಧಿಕಾರವನ್ನು ಅನುಭವಿಸಲು ಅಲ್ಲ. ದೇಶಕ್ಕೆ ದುಡಿಯಲು. ನನ್ನ ಮನೆ ಬಗ್ಗೆಯೇ ಯೋಚಿಸಿದ್ದರೆ, ಕೋಟ್ಯಂತರ ಜನರಿಗೆ ಮನೆಗಳನ್ನು ನಿರ್ಮಿಸಲು ಆಗುತ್ತಿರಲಿಲ್ಲ ಎಂದರು.

‘ವಿಶ್ವದ ವಿವಿಧ ರಾಷ್ಟ್ರಗಳು ಭಾರತದ ಜೊತೆಗೆ ಗಾಢ ಬಾಂಧವ್ಯವನ್ನು ಹೊಂದಲು ಈಗ ಬಯಸುತ್ತಿವೆ. ಸಾರ್ವತ್ರಿಕ ಚುನಾವಣೆ ಇನ್ನೂ ನಡೆಯಬೇಕಿದೆ. ಆದರೆ  ಜುಲೈ, ಆಗಸ್ಟ್, ಸೆಪ್ಟೆಂಬರ್‌ ತಿಂಗಳಲ್ಲಿ ಭೇಟಿ ನೀಡುವಂತೆ ಈಗಾಗಲೇ ಅನೇಕ ರಾಷ್ಟ್ರಗಳು ನನ್ನನ್ನು ಆಹ್ವಾನಿಸಿವೆ. ಬಿಜೆಪಿ ಅಧಿಕಾರಕ್ಕೆ ಮರಳುವ ಕುರಿತು ಅವುಗಳಿಗೆ ಖಾತ್ರಿಯಿದೆ’ ಎಂದರು.

‘ಜಗತ್ತಿನ ಪ್ರತಿ ರಾಷ್ಟ್ರಕ್ಕೂ ಗೊತ್ತಿದೆ. ಆಯೇಗಾ ತೋ..’ ಎಂದು ಪ್ರಧಾನಿ ಅವರು ಹೇಳುತ್ತಿದ್ದಂತೆ ಕಾರ್ಯಕರ್ತರು ‘ಆಯೇಗಾ ತೋ..  ಮೋದಿ ಹೀ ಆಯೇಗಾ’ ಎಂದು ಪ್ರಧಾನಿ ಮಾತಿಗೆ ದನಿಗೂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.