ADVERTISEMENT

ಭಾರತಕ್ಕೆ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾರಂತಹ ನಾಯಕರ ಅಗತ್ಯವಿದೆ: ಜೈರಾಮ್ ರಮೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2023, 5:31 IST
Last Updated 19 ಜನವರಿ 2023, 5:31 IST
ಜಸಿಂದಾ ಆರ್ಡೆರ್ನ್‌ ಮತ್ತು ಜೈರಾಮ್ ರಮೇಶ್‌
ಜಸಿಂದಾ ಆರ್ಡೆರ್ನ್‌ ಮತ್ತು ಜೈರಾಮ್ ರಮೇಶ್‌   

ನವದೆಹಲಿ: ಭಾರತದ ರಾಜಕಾರಣಕ್ಕೆ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡೆರ್ನ್‌ ಅವರಂತಹ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಹೇಳಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಫೆಬ್ರುವರಿ 7ರೊಳಗೆ ಉನ್ನತ ಹುದ್ದೆಯಿಂದ ಕೆಳಗಿಳಿಯುವುದಾಗಿ ಪಕ್ಷದ ಸಭೆಯಲ್ಲಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜೈರಾಮ್ ರಮೇಶ್, ‘ಖ್ಯಾತ ಕ್ರಿಕೆಟ್ ವಿಶ್ಲೇಷಕ, ವಿಜಯ್ ಮರ್ಚೆಂಟ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಿವೃತ್ತಿ ಹೊಂದುವ ಬಗ್ಗೆ ಒಮ್ಮೆ ಹೇಳಿದ್ದರು. ಆದರೆ, ಅಭಿಮಾನಿಗಳು ವಿಜಯ್ ಅವರನ್ನು ಯಾವಾಗ ನಿವೃತ್ತಿ ಹೊಂದುತ್ತೀರಿ ಎಂದು ಕೇಳಲಿಲ್ಲ. ಬದಲಿಗೆ ಏಕೆ ನಿವೃತ್ತರಾಗುತ್ತಿದ್ದೀರಿ ಎಂದು ಕೇಳಿದ್ದರು. ಇದೀಗ ಕಿವೀಸ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅವರು ಮರ್ಚೆಂಟ್‌ರ ನಿಯಮವನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ. ಭಾರತದ ರಾಜಕೀಯಕ್ಕೆ ಜಸಿಂದಾ ಅವರಂತಹವರು ಬೇಕಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ನ್ಯೂಜಿಲೆಂಡ್‌ನಲ್ಲಿ 2023ರ ಅಕ್ಟೋಬರ್ 14ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಜಸಿಂದಾ ಅವರು 2017 ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿತ್ತು. ಅಧಿಕಾರವಧಿಯಲ್ಲಿ ಮಗುವಿಗೆ ಜನ್ಮ ನೀಡಿದ ಕೆಲವೇ ನಾಯಕರಲ್ಲಿ ಜಸಿಂದಾ ಒಬ್ಬರು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್‌ ಭುಟ್ಟೊ ಅವರು 1990ರಲ್ಲಿ ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ್ದರು.

‘ಇದೀಗ ದೊಡ್ಡ ಜವಾಬ್ದಾರಿ ಇರುವ ಉನ್ನತ ಹುದ್ದೆಯನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಧಾನಿ ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ’ ಎಂದು ಜಸಿಂದಾ ಹೇಳಿದ್ದಾರೆ.

ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುತ್ತಿಲ್ಲ ಎಂದು ಜಸಿಂದಾ ಅವರು ದಿಢೀರ್ ನಿರ್ಧಾರ ಪ್ರಕಟಿಸಿದ್ದು, ಪಕ್ಷದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಇದೊಂದು ದೊಡ್ಡ ಮತ್ತು ಅತ್ಯಂತ ಹೆಚ್ಚಿನ ಜವಾಬ್ದಾರಿಯುವ ಹುದ್ದೆಯಾಗಿದೆ. ಅದನ್ನು ನಿರ್ವಹಿಸುವುದು ಕೂಡ ಸುಲಭವಲ್ಲ. ಅಂತಹ ಹುದ್ದೆಗೆ ಸೂಕ್ತ ವ್ಯಕ್ತಿ ಇದ್ದರೆ ಚೆನ್ನ. ನನಗೆ ಪ್ರಧಾನಿ ಹುದ್ದೆ ನಿಭಾಯಿಸಲು, ಪದವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಸಿಂದಾ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.