ADVERTISEMENT

ಪಾಕಿಸ್ತಾನ | ಭಾರತೀಯ ಕೈದಿಯನ್ನು ಹತ್ಯೆ ಮಾಡಿದ್ದವನ ಕೊಲೆ

ಪಿಟಿಐ
Published 14 ಏಪ್ರಿಲ್ 2024, 14:52 IST
Last Updated 14 ಏಪ್ರಿಲ್ 2024, 14:52 IST
.
.   

ನವದೆಹಲಿ: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಸರಬ್ಜಿತ್‌ ಸಿಂಗ್‌ ಅವರನ್ನು ಹತ್ಯೆ ಮಾಡಿದ್ದ ಆರೋಪಿ ಅಮೀರ್‌ ಸರ್ಫರಾಜ್‌ ತಾಂಬಾನನ್ನು ಲಾಹೋರ್‌ನಲ್ಲಿ ಭಾನುವಾರ ಅಪರಿಚಿತ ಬಂದೂಕುಧಾರಿ ಗುಂಡಿಕ್ಕಿ ಕೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತಾಂಬಾ, ಲಷ್ಕರ್‌–ಎ–ತಯಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಹಫೀಜ್‌ ಸಯೀದ್‌ನ ನಿಕಟವರ್ತಿಯಾಗಿದ್ದ.

ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಮೋಟಾರು ಸೈಕಲ್‌ನಲ್ಲಿ ಬಂದ ದುಷ್ಕರ್ಮಿ, ತಾಂಬಾ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಾಂಬಾನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಆತ ಮೃತಪಟ್ಟ ಎಂದು ಮೂಲಗಳು ತಿಳಿಸಿವೆ.

ADVERTISEMENT

1990ರಲ್ಲಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದ್ದ ಹಲವು ಬಾಂಬ್‌ ಸ್ಫೋಟಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಸರಬ್ಜಿತ್‌ ಸಿಂಗ್‌ಗೆ ಮರಣದಂಡನೆ ವಿಧಿಸಲಾಗಿತ್ತು. 49 ವರ್ಷದ ಸಿಂಗ್‌ ಅನ್ನು ಭಾರಿ ಭದ್ರತೆಯಿದ್ದ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ತಾಂಬಾ ಸೇರಿದಂತೆ ಇತರ ಕೈದಿಗಳ ಗುಂಪು ಸಿಂಗ್ ಮೇಲೆ ಇಟ್ಟಿಗೆ, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿತ್ತು. ತೀವ್ರ ಗಾಯಗೊಂಡಿದ್ದ ಸಿಂಗ್‌, ಲಾಹೋರ್‌ನ ಜಿನ್ನಾ ಆಸ್ಪತ್ರೆಯಲ್ಲಿ ಒಂದು ವಾರದವರೆಗೆ ಕೋಮಾದಲ್ಲಿದ್ದರು. ಅವರು 2013ರ ಮೇ 2ರ ಮುಂಜಾನೆ ಹೃದಯ ಸ್ತಂಭನದಿಂದ ನಿಧನರಾಗಿದ್ದರು.

ಸರ್ಫರಾಜ್‌ ಜಾವೇದ್‌ ಅವರ ಮಗನಾದ ಅಮೀರ್‌ ಸರ್ಫರಾಜ್‌ ತಾಂಬಾ ಲಾಹೋರ್‌ನಲ್ಲಿ 1979ರಲ್ಲಿ ಜನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.