ನವದೆಹಲಿ: ಕಳೆದ 9 ತಿಂಗಳ ಅವಧಿಯಲ್ಲಿ ರೈಲ್ವೆ ಇಲಾಖೆಯ ಸುಮಾರು 30,000 ಸಿಬ್ಬಂದಿ ಕೋವಿಡ್ ಪೀಡಿತರಾಗಿದ್ದು, ಈ ಪೈಕಿ 700 ಮಂದಿ ಮೃತಪಟ್ಟಿದ್ದಾರೆ.
ಕೋವಿಡ್ ಸ್ಥಿತಿಯ ನಡುವೆ ಸಾರ್ವಜನಿಕರ ಸಂಚಾರಕ್ಕೆ ರೈಲು ವ್ಯವಸ್ಥೆ ಮಾಡುವ ಅವಧಿಯಲ್ಲಿಯೇ ಕೋವಿಡ್‌ನಿಂದ ಸಿಬ್ಬಂದಿ ಸಾವುಗಳು ಸಂಭವಿಸಿವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯು ವಲಸಿಗ ಕಾರ್ಮಿಕರಿಗಾಗಿ ಮೊದಲು ಶ್ರಮಿಕ್ ರೈಲು ಸಂಚಾರಕ್ಕೆ ಹಾಗೂ ನಂತರ ಸಾರ್ವಜನಿಕರಿಗಾಗಿ ವಿಶೇಷ ರೈಲು ಸಂಚಾರ ವ್ಯವಸ್ಥೆಯನ್ನು ಮಾಡಿತ್ತು.
ಮೃತಪಟ್ಟ 700 ಸಿಬ್ಬಂದಿಯಲ್ಲಿ ಹೆಚ್ಚಿನವರು ಸಾರ್ವಜನಿಕರೊಂದಿಗೆ ಮುಖಾಮುಖಿ ಆಗಿದ್ದರು. ಇವು ಮುಂಚೂಣಿ ಸಿಬ್ಬಂದಿಯಾಗಿದ್ದು, ಫ್ಲಾಟ್‌ಫಾರಂ ಸೇರಿದಂತೆ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ರೈಲ್ವೆ ಇಲಾಖೆಯು ಪ್ರತಿ ವಲಯ ಮತ್ತು ವಿಭಾಗಗಳಲ್ಲಿ ತನ್ನ ಸಿಬ್ಬಂದಿಗಾಗಿ ಕೋವಿಡ್ ಆರೈಕೆ ಕೇಂದ್ರಗಳು ತೆರೆದಿದ್ದು, ಸೌಲಭ್ಯಗಳನ್ನು ಒದಗಿಸಿತ್ತು. ಆರಂಭದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ 74 ಆಸ್ಪತ್ರೆಗಳನ್ನು ನಿಗದಿಪಡಿಸಿತ್ತು.
ಈ ಹಿಂದೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಸಂಸತ್ತಿನಲ್ಲಿ, ಇಲಾಖೆಯ 14,714 ಸಿಬ್ಬಂದಿ ಕೋವಿಡ್ ಪೀಡಿತರಾಗಿದ್ದು, 336 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.