ADVERTISEMENT

ಈ ವರ್ಷವೇ ‘ಜಲಜನಕ‘ ರೈಲಿನ ಪರೀಕ್ಷಾರ್ಥ ಪ್ರಯೋಗ: ಅನಿಲ್‌ ಕುಮಾರ್‌ ಲಹೋಟಿ

ಪಿಟಿಐ
Published 3 ಮೇ 2023, 13:52 IST
Last Updated 3 ಮೇ 2023, 13:52 IST
ಹೈಡ್ರೋಜನ್‌ ರೈಲು (ಚಿತ್ರ ಎಎಫ್‌ಪಿ)
ಹೈಡ್ರೋಜನ್‌ ರೈಲು (ಚಿತ್ರ ಎಎಫ್‌ಪಿ)    

ಇಂಧೋರ್‌ : ಪ್ರಸಕ್ತ ಆರ್ಥಿಕ ಸಾಲಿನಲ್ಲಿಯೇ ದೇಶದ ಮೊದಲ ಜಲಜನಕ ಚಾಲಿತ (ಹೈಡ್ರೋಜನ್‌ ಟ್ರೇನ್) ರೈಲಿನ ಪರೀಕ್ಷಾರ್ಥ ಪ್ರಯೋಗಕ್ಕೆ ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ.

ಬುಧವಾರ ಇಲ್ಲಿ ನಡೆದ ಇಂಧೋರ್‌ ವ್ಯಾಪ್ತಿಯ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಭಾರತೀಯ ರೈಲ್ವೆ ಮಂಡಳಿ ಮುಖ್ಯಸ್ಥ ಅನಿಲ್‌ ಕುಮಾರ್‌ ಲಹೋಟಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಈ ಮಾದರಿಯ ರೈಲುಗಳ ಸಂಚಾರವು ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲಿವೆ. ಈಗಾಗಲೇ, ಉತ್ತರ ರೈಲ್ವೆ ವಿಭಾಗವು ಜಲಜನಕ ಚಾಲಿತ ರೈಲುಗಳ ಅಭಿವೃದ್ಧಿಗೆ ಸಂಬಂಧಿಸಿದ ಗುತ್ತಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.  

ADVERTISEMENT

‘ಈಗಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ವಂದೇ ಮಾತರಂ ಹೈಸ್ಪೀಡ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಇದರ ನಡುವೆಯೇ ಪರಿಸರ ಸ್ನೇಹಿಯಾದ ಜಲಜನಕ ಇಂಧನ ಕೋಶ ಚಾಲಿತ ರೈಲು ಸಂಚಾರಕ್ಕೆ ಚಾಲನೆ ನೀಡುವ ಇರಾದೆ ಇದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯತತ್ಪರವಾಗಿದೆ‘ ಎಂದು ಹೇಳಿದರು.

‌‌‘ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಮಾದರಿಯ ರೈಲುಗಳ ತಂತ್ರಜ್ಞಾನ ಹೊಸತಾಗಿದೆ. ದೇಶದಲ್ಲಿಯೂ ಮೊದಲ ಬಾರಿಗೆ ಇದರ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಈ ಯೋಜನೆಯ ಕಾರ್ಯರೂಪಕ್ಕೆ ಭಾರತೀಯ ರೈಲ್ವೆ ಬದ್ಧವಾಗಿದೆ‘ ಎಂದರು. 

ಹೈಡ್ರೋಜನ್‌ ಟ್ರೇನ್‌ ತಂತ್ರಜ್ಞಾನವು ವಿಶ್ವದಾದ್ಯಂತ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿದೆ. ಇದರ ಬಳಕೆಗೆ ನಾವು ಕೂಡ ದಿಟ್ಟಹೆಜ್ಜೆ ಇಟ್ಟಿದ್ದೇವೆ ಎಂದು ತಿಳಿಸಿದರು.

ಕಾರ್ಯ ನಿರ್ವಹಣೆ ಹೇಗೆ?

ಜಲಜನಕ ರೈಲು ಪರಿಸರ ಸ್ನೇಹಿಯಾದುದು. ಜಲಜನಕ ಮತ್ತು ಆಮ್ಲಜನಕ ಸಂಯೋಜನೆಯ ಇಂಧನ ಕೋಶಗಳು ವಿದ್ಯುತ್‌ ಉತ್ಪಾದಿಸುತ್ತವೆ. ಇದರಿಂದ ಕೇವಲ ನೀರು ಮತ್ತು ಉಗಿ ಮಾತ್ರವಷ್ಟೇ ಸೃಷ್ಟಿಯಾಗುತ್ತದೆ. ಈ ಇಂಧನ ಕೋಶಗಳು ಎರಡು ಬೋಗಿಗಳ ಮಧ್ಯದಲ್ಲಿ ಇರುತ್ತವೆ. ಶೂನ್ಯ ಮಾಲಿನ್ಯದ ಈ ರೈಲುಗಳು ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯ ಸೃಷ್ಟಿಸುವ ಡೀಸೆಲ್‌ ಎಂಜಿನ್‌ ರೈಲುಗಳಿಗೆ ಪರ್ಯಾಯವಾಗಿವೆ.

ಏಷ್ಯಾದಲ್ಲಿ ಪ್ರಥಮ ಬಾರಿಗೆ ಚೀನಾವು ಹೈಡ್ರೋಜನ್ ಆಧರಿತ ಸೆಮಿ ಹೈಸ್ಪೀಡ್ ರೈಲನ್ನು ಅಳವಡಿಸಿಕೊಂಡಿದೆ. ಜಗತ್ತಿನಲ್ಲಿ ಮೊದಲ ಬಾರಿಗೆ ಜರ್ಮನಿ ಈ ತರಹದ ರೈಲನ್ನು ಬಳಕೆಗೆ ತಂದಿದೆ.

ಚೀನಾ ಬಳಸುವ ಹೈಡ್ರೋಜನ್ ಆಧರಿತ ಸೆಮಿ ಹೈಸ್ಪೀಡ್ ರೈಲಿನ ಹೈಡ್ರೋಜನ್ ಇಂಧನ ಕೋಶವು ಒಮ್ಮೆ ಚಾರ್ಜ್ ಮಾಡಿದರೆ ಗಂಟೆಗೆ 160 ಕಿ.ಮೀ ವೇಗದಲ್ಲಿ 600 ಕಿ.ಮೀ.ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.