ನವದೆಹಲಿ: ಟಿಕೆಟ್ ಬುಕ್ಕಿಂಗ್, ಪ್ಲಾಟ್‌ಫಾರ್ಮ್ ಪಾಸ್, ಪಿಎನ್‌ಆರ್ ಸ್ಥಿತಿ ಹಾಗೂ ರೈಲು ಸಂಚಾರದ ಸಮಯ ತಿಳಿದುಕೊಳ್ಳುವುದು ಸೇರಿದಂತೆ ಭಾರತೀಯ ರೈಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗೆ ಒಂದೇ ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರೀಯ ರೈಲ್ವೆ ಮಾಹಿತಿ ವ್ಯವಸ್ಥೆ (CRIS) ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.
ಸದ್ಯ ಐಆರ್‌ಸಿಟಿಸಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಅಪ್ಲಿಕೇಷನ್‌ಗಳನ್ನು ಒಗ್ಗೂಡಿಸಿ ಒಂದೇ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸೂಪರ್ ಆ್ಯಪ್ ಹಾಗೂ ಹಾಲಿ ಇರುವ ಆ್ಯಪ್‌ಗಳನ್ನು ಲಿಂಕ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಟಿಕೆಟ್‌ಗಾಗಿ ಐಆರ್‌ಸಿಟಿಸಿ ರೈಲ್ ಕನೆಕ್ಟ್, ಆಹಾರಕ್ಕಾಗಿ ಐಆರ್‌ಸಿಟಿಸಿ ಇಕೇಟರಿಂಗ್, ಪ್ರತಿಕ್ರಿಯೆಗಾಗಿ ರೈಲ್ ಮದದ್, ಮುಂಗಡ ಕಾಯ್ದಿರಿಸದ ಟಿಕೆಟ್‌ಗಾಗಿ ಯುಟಿಎಸ್, ರೈಲಿನ ಸದ್ಯದ ಸಂಚಾರ ಸ್ಥಳದ ಮಾಹಿತಿಗಾಗಿ ನ್ಯಾಷನಲ್ ಟ್ರೈನ್ ಎಂಕ್ವೈರಿ ಸಿಸ್ಟಂ ಆ್ಯಪ್ ಹಾಗೂ ಅಂತರ್ಜಾಲ ತಾಣಗಳು ಸದ್ಯ ಬಳಕೆಯಲ್ಲಿವೆ.
ಇವುಗಳಲ್ಲಿ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಆ್ಯಪ್ ಅನ್ನು ಸುಮಾರು 10 ಕೋಟಿ ಜನರು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸುವ ಸಲುವಾಗಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಆ್ಯಪ್ ಇದಾಗಿದೆ. ಸೂಪರ್ ಆ್ಯಪ್ ಮೂಲಕ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಅನ್ನು ಇನ್ನಷ್ಟು ಉತ್ತೇಜಿಸುವ ಗುರಿ ಹೊಂದಲಾಗಿದೆ. ಜತೆಗೆ ಇದು ರೈಲ್ವೆಗೆ ಆದಾಯ ಮೂಲವೂ ಆಗಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2023–24ನೇ ಸಾಲಿನಲ್ಲಿ ರೈಲ್ವೆ ಗಳಿಸಿದ ₹4,270 ಕೋಟಿ ಒಟ್ಟು ಆದಾಯದಲ್ಲಿ ₹1,111 ಕೋಟಿಯಷ್ಟು ಲಾಭವನ್ನು ದಾಖಲಿಸಿದೆ ಎಂದು ಐಆರ್‌ಸಿಟಿಸಿ ಹೇಳಿದೆ. 45 ಕೋಟಿ ಮುಂಗಡ ಬುಕ್ಕಿಂಗ್‌ನಿಂದ ಟಿಕೆಟ್ ಮಾರಾಟ ಮಾಡಿದ್ದು, ಇದು ಒಟ್ಟು ಆದಾಯದ ಶೇ 30ರಷ್ಟಾಗಿದೆ. ಯುಟಿಎಸ್ ಅಪ್ಲಿಕೇಷನ್ ಮೂಲಕ ಪ್ಲಾಟ್‌ಫಾರ್ಮ್ ಟಿಕೆಟ್ ಹಾಗೂ ಸೀಸನ್ ಪಾಸ್ ಡೌನ್‌ಲೋಡ್ ಮಾಡಲು ಸಾಧ್ಯ. ಇದು ಈಗಾಗಲೇ ಒಂದು ಕೋಟಿ ಬಾರಿ ಬಳಕೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.