ನವದೆಹಲಿ: ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ಸಲುವಾಗಿ ಮುಂದಿನ 10 ದಿನಗಳಲ್ಲಿ ಇನ್ನೂ 2,600 ಶ್ರಮಿಕ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶನಿವಾರ ಘೋಷಿಸಿದೆ.
ಈ ನಿರ್ಧಾರದಿಂದ 36 ಲಕ್ಷ ವಲಸೆ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಹೇಳಿದ್ದಾರೆ.
ಕಳೆದ 23 ದಿನಗಳಲ್ಲಿ 2,600 ಶ್ರಮಿಕ ವಿಶೇಷ ರೈಲುಗಳು ದೇಶದಾದ್ಯಂತ ಸಂಚಾರ ಮಾಡಿವೆ. ಈವರೆಗೆ ಸುಮಾರು 36 ಲಕ್ಷ ವಲಸೆ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗಾಗಿ ಶ್ರಮಿಕ ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ಭಾರತೀಯ ರೈಲ್ವೆ ಸದಾ ಸಿದ್ಧವಿದೆ ಎಂದೂ ಅವರು ಹೇಳಿದ್ದಾರೆ.
ಮೇ 12ರ ಬಳಿಕ ಶ್ರಮಿಕ ವಿಶೇಷ ರೈಲುಗಳನ್ನು ಹೊರತುಪಡಿಸಿ ಭಾರತೀಯ ರೈಲ್ವೆಯು 15 ಜೋಡಿ ವಿಶೇಷ ಎಸಿ ರೈಲುಗಳನ್ನು ಸಂಚಾರಕ್ಕಿಳಿಸಿದ್ದು ಅವುಗಳ ಶೇ 98ರಷ್ಟು ಟಿಕೆಟ್‌ಗಳು ಈಗಾಗಲೇ ಕಾಯ್ದಿರಿಸಲಾಗಿದೆ. ಜೂನ್ 1ರಿಂದ ಇನ್ನೂ 200 ರೈಲುಗಳು ಕಾರ್ಯಾರಂಭ ಮಾಡಲಿದ್ದು, ಅವುಗಳ ಶೇ 30ರಷ್ಟು ಟಿಕೆಟ್‌ಗಳೂ ಕಾಯ್ದಿರಿಸಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.