ADVERTISEMENT

ಖಾಸಗಿ ವಲಯಕ್ಕೆ ಇಸ್ರೊದಿಂದ ಹೆಚ್ಚಿನ ಉತ್ತೇಜನ: ಎಸ್‌. ಸೋಮನಾಥ್‌

ಪಿಟಿಐ
Published 12 ಮೇ 2024, 13:09 IST
Last Updated 12 ಮೇ 2024, 13:09 IST
ಎಸ್‌. ಸೋಮನಾಥ್‌
ಎಸ್‌. ಸೋಮನಾಥ್‌   

ಕೊಚ್ಚಿ: ಭಾರತೀಯ ಬಾಹ್ಯಾಕಾಶ ಉದ್ಯಮವು ಖಾಸಗಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಅನುಕೂಲವನ್ನು ಸುಮಾರು 400 ಖಾಸಗಿ ಸಂಸ್ಥೆಗಳು ಪಡೆಯುತ್ತಿವೆ ಎಂದು ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ಶನಿವಾರ ಹೇಳಿದರು.

ನೆಸ್ಟ್‌ ಗ್ರೂಪ್‌ ಸಂಸ್ಥೆಯ ಎಸ್‌ಎಫ್‌ಒ ಟೆಕ್ನಾಲಜೀಸ್‌ನ ‘ಇಂಗಾಲ ಪ್ರಮಾಣ ತಗ್ಗಿಸುವ ಕಾರ್ಯಯೋಜನೆ’ಯನ್ನು ಅನಾವರಣ ಮಾಡಿ ಅವರು ಹೀಗೆ ಹೇಳಿದರು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ. 

‘ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಕೈಗೊಂಡಿರುವ ಹೊಸ ನೀತಿಗಳ ಲಾಭ ಪಡೆದುಕೊಳ್ಳಲು ಎಸ್‌ಎಫ್‌ಒ ಟೆಕ್ನಾಲಜೀಸ್‌ನಂಥ ಸಂಸ್ಥೆಗಳು ಸನ್ನದ್ಧವಾಗಿವೆ’ ಎಂದು ಸೋಮನಾಥ್‌ ಹೇಳಿದರು.

ADVERTISEMENT

ಇದೇ ವೇಳೆ ಸೋಮನಾಥ್‌ ಅವರು ನೆಸ್ಟ್‌ ಹೈಟೆಕ್‌ ಪಾರ್ಕ್‌ ಆವರಣದಲ್ಲಿ ಸಸಿ ನೆಟ್ಟರು. ಎಸ್‌ಎಫ್‌ಒ ಟೆಕ್ನಾಲಜೀಸ್‌ ಸಂಸ್ಥೆಯು ಇಸ್ರೊಗೆ ನೀಡಿರುವ ಸಹಕಾರದ ಸ್ಮರಣಾರ್ಥವಾಗಿ ‘ಚಂದ್ರಯಾನ’ದ ಪ್ರತಿಕೃತಿಯನ್ನು ಬಿಡುಗಡೆ ಮಾಡಿದರು. ಆ ಬಳಿಕ, ನೆಸ್ಟ್‌ ಸಂಸ್ಥೆಯ ಉದ್ಯೋಗಿಗಳ ಜೊತೆ ಸಂವಾದ ನಡೆಸಿದರು. 

ಇಂಗಾಲ ಪ್ರಮಾಣ ತಗ್ಗಿಸುವ ಕಾರ್ಯಯೋಜನೆಯನ್ನು ನೆಸ್ಟ್‌ ಸಂಸ್ಥೆಯು ವಿಶ್ವಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. 2035ರ ಒಳಗೆ ಶೇ 50ರಷ್ಟು ಇಂಗಾಲ ಪ್ರಮಾಣ ತಗ್ಗಿಸುವ ಮತ್ತು 2040ರ ಒಳಗೆ ಶೂನ್ಯ ಇಂಗಾಲ ಸೂಸುವಿಕೆ ಸಾಧಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಎಸ್‌ಎಫ್ಒ ಟೆಕ್ನಾಲಜೀಸ್‌ ಸಂಸ್ಥೆಯು ಇಸ್ರೊ ಜೊತೆ ಹಲವು ವರ್ಷಗಳ ಸಹಯೋಗ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.