ಬಾಘ್ಮಾರಾ (ಧನಬಾದ್): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೂಪಿಸಿರುವ ತೆರಿಗೆ ವ್ಯವಸ್ಥೆಯು ಬಡವರನ್ನು ಲೂಟಿ ಮಾಡಲು ವಿನ್ಯಾಸಗೊಳಿಸಿರುವುದಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್‌ನ ಧನಬಾದ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಭಾರತೀಯ ತೆರಿಗೆ ವ್ಯವಸ್ಥೆಯು ಬಡವರನ್ನು ಲೂಟಿ ಮಾಡುವುದಾಗಿದೆ. ಅದಾನಿಯೂ ನಿಮ್ಮಷ್ಟೇ ತೆರಿಗೆಯನ್ನು ಪಾವತಿಸುತ್ತಾರೆ. ಸುಮಾರು ₹1 ಲಕ್ಷ ಕೋಟಿ ಬೆಲೆ ಬಾಳುವ ಧಾರಾವಿಯ ಭೂಮಿಯನ್ನು ಅದಾನಿಗೆ ಹಸ್ತಾಂತರಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್, ‘ಪ್ರಧಾನಿ ಮೋದಿಯವರು ಸೀಪ್ಲೇನ್‌ನಲ್ಲಿ ಪ್ರಯಾಣಿಸುತ್ತಾರೆ. ಸಮುದ್ರದೊಳಗೂ ಹೋಗುತ್ತಾರೆ. ಆದರೆ, ಬೆಲೆ ಏರಿಕೆಯ ಭಾರವನ್ನು ಬಡವರು ಮತ್ತು ಮಹಿಳೆಯರು ಅನುಭವಿಸುತ್ತಾರೆ’ ಎಂದು ಆರೋಪಿಸಿದರು.
ದೇಶದ ಜನಸಂಖ್ಯೆಯ ಶೇ 90ರಷ್ಟು ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರಿದ್ದಾರೆ. ಆದರೆ ಅವರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವಿಲ್ಲ ಎಂದೂ ಹೇಳಿದರು.
‘ಮೋದಿ ಅವರು ಮನ್ನಾ ಮಾಡಿದ ಬಂಡವಾಳಶಾಹಿಗಳ ಸಾಲಕ್ಕೆ ಸಮನಾದ ಹಣವನ್ನು ಬಡವರಿಗೆ ನೀಡುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.