ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶಾ ಫೋಗಟ್ ಅವರು ಅನರ್ಹಗೊಂಡಿರುವುದರ ಬಗ್ಗೆ, ಆಕೆಯ ಚಿಕ್ಕಪ್ಪ ಮಹಾವೀರ್ ಸಿಂಗ್ ಪೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ವಿನೇಶಾ ಫೋಗಟ್ ಅನರ್ಹಗೊಂಡಿರುವುದರ ಬಗ್ಗೆ ನಾನು ಹೇಳಲು ಏನೂ ಉಳಿದಿಲ್ಲ. ಇಡೀ ದೇಶಕ್ಕೆ ಚಿನ್ನದ ಪದಕದ ಭರವಸೆ ಇತ್ತು. ಆದರೆ, ನಿಯಮದ ಪ್ರಕಾರ ಆಕೆ ಅನರ್ಹಗೊಂಡಿದ್ದಾಳೆ. ನಿಯಮಗಳ ಹೊರತಾಗಿಯೂ ಕುಸ್ತಿಪಟು 50ರಿಂದ 100 ಗ್ರಾಂ ಅಧಿಕ ತೂಕ ಹೊಂದಿದ್ದರೆ ಸಾಮಾನ್ಯವಾಗಿ ಆಟವಾಡಲು ಅನುಮತಿಸಲಾಗುತ್ತದೆ. ಆದರೆ, ಇದು ಈ ಬಾರಿ ಸಾಧ್ಯವಾಗಿಲ್ಲ’ ಎಂದು ಕಣ್ಣೀರು ಹಾಕಿದ್ದಾರೆ.
‘ಹತಾಶರಾಗಬೇಡಿ ಎಂದು ದೇಶದ ಜನರಲ್ಲಿ ನಾನು ವಿನಂತಿಸುತ್ತೇನೆ. ಮುಂದಿನ ದಿನಗಳಲ್ಲಿ ದೇಶಕ್ಕಾಗಿ ವಿನೇಶಾ ಫೋಗಟ್ ಖಂಡಿತವಾಗಿಯೂ ಪದಕ ಗೆದ್ದೇ ಗೆಲ್ಲುತ್ತಾಳೆ ಎಂಬ ವಿಶ್ವಾಸ ನನಗಿದೆ. ಅದರಂತೆಯೇ ನಾನು ಆಕೆಯನ್ನು ಮುಂದಿನ ಒಲಿಂಪಿಕ್ಸ್‌ಗೆ ಸಿದ್ಧಪಡಿಸುತ್ತೇನೆ’ ಎಂದು ಹೇಳಿದ್ದಾರೆ.
ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶಾ ಅವರನ್ನು 100 ಗ್ರಾಂ ಹೆಚ್ಚು ತೂಕ ಹೊಂದಿದ್ದಕ್ಕೆ ಒಲಿಂಪಿಕ್ಸ್ ಸಂಸ್ಥೆ ಅನರ್ಹಗೊಳಿಸಿದೆ.
ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್‌ನಲ್ಲಿ ವಿನೇಶಾ 5–0ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದಿದ್ದರು. ಇಂದು ರಾತ್ರಿ ನಡೆಯುವ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರನ್ನು ವಿನೇಶಾ ಎದುರಿಸಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.