ನವದೆಹಲಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ವೈದ್ಯರು ದೇಶದಾದ್ಯಂತ ಮುಷ್ಕರ ನಡೆಸಿದ್ದರಿಂದ ಶನಿವಾರ ಹಲವೆಡೆ ವೈದ್ಯಕೀಯ ಸೇವೆಯಲ್ಲಿ ಏರುಪೇರು ಉಂಟಾಗಿ ರೋಗಿಗಳು ಪರದಾಡಿದರು.
ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ಒಪಿಡಿ ಸೇವೆ (ಹೊರರೋಗಿಗಳ ವಿಭಾಗ) ಸ್ಥಗಿತಗೊಳಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ್ದ ಕರೆಗೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆಯಿತು.
ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಥಾನಿಕ ವೈದ್ಯರು ಕಳೆದ ಸೋಮವಾರದಿಂದಲೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಶನಿವಾರ ಖಾಸಗಿ ಆಸ್ಪತ್ರೆಗಳೂ ಬೆಂಬಲ ನೀಡಿದವು.
ರಾಷ್ಟ್ರದ ರಾಜಧಾನಿಯಲ್ಲಿ ಹಲವು ಪ್ರಮುಖ ಖಾಸಗಿ ಆಸ್ಪತ್ರೆಗಳು ಮುಷ್ಕರದಲ್ಲಿ ಕೈಜೋಡಿಸಿದವು. ಸರ್ ಗಂಗಾ ರಾಮ್, ಫೋರ್ಟಿಸ್ ಮತ್ತು ಅಪೋಲೊ ಅಸ್ಪತ್ರೆಗಳಲ್ಲಿ ಒಪಿಡಿ, ಐಪಿಡಿ ಮತ್ತು ಆಯ್ದ ಕೆಲವು ಶಸ್ತ್ರಚಿಕಿತ್ಸಾ ಸೇವೆಗಳನ್ನು ನಿಲ್ಲಿಸಲಾಯಿತು.
‘ನ್ಯಾಯದಾನ ವಿಳಂಬವಾಗದಂತೆ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಲು ಮತ್ತು ತನಿಖಾ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಪ್ರತಿಭಟನೆಗಳು ಹಾಗೂ ವೈದ್ಯರ ಮುಷ್ಕರ ಈಗ ಅಗತ್ಯವಾಗಿದೆ’ ಎಂದು ಗಂಗಾ ರಾಮ್ ಆಸ್ಪತ್ರೆಯ ಮುಖ್ಯಸ್ಥ ಅಜಯ್ ಸ್ವರೂಪ್ ತಿಳಿಸಿದರು.
‘ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಖಾತರಿಪಡಿಸಲು ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವವರೆಗೂ ಈ ಹೋರಾಟವನ್ನು ನಾವು ಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದು ಹೇಳಿದರು.
ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಛತ್ತೀಸಗಢ, ಬಿಹಾರ, ರಾಜಸ್ಥಾನ, ಜಾರ್ಖಂಡ್, ಅಸ್ಸಾಂ, ಮಿಜೊರಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲೂ ಮುಷ್ಕರದಿಂದಾಗಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾದವು.
ಮುಖ ಅಂಶಗಳು
ಛತ್ತೀಸಗಢದಲ್ಲಿ 4500ಕ್ಕೂ ಅಧಿಕ ವೈದ್ಯರು ಮುಷ್ಕರದಲ್ಲಿ ಕೈಜೋಡಿಸಿದ್ದರಿಂದ ರಾಜ್ಯದಾದ್ಯಂತ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಖಾತರಿಪಡಿಸುವಂತೆ ಒತ್ತಾಯಿಸಿ ಪಂಜಾಬ್ ಮತ್ತು ಹರಿಯಾಣದಲ್ಲಿ ವೈದ್ಯರು ಹಲವೆಡೆ ಪ್ರತಿಭಟನೆ ನಡೆಸಿದರು.
ಗುಜರಾತ್‌ನಲ್ಲಿ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ಬಂದ್ ಮಾಡಿದವು. ಕೆಲವು ಆಸ್ಪತ್ರೆಗಳು ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಿಲ್ಲ.
ಪಟ್ನಾದ ಏಮ್ಸ್ ಕ್ಯಾಂಪಸ್‌ನಲ್ಲಿ ಇನ್ನಷ್ಟು ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಹಾಗೂ ಹೆಚ್ಚುವರಿಯಾಗಿ 150 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಕೃಷ್ಣ ಪಾಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.