ADVERTISEMENT

ಜಗತ್ತಿನಾದ್ಯಂತ ಭಾರತೀಯರಿಂದ ಸ್ವಾತಂತ್ರ್ಯ ದಿನಾಚರಣೆ

ಪಿಟಿಐ
Published 15 ಆಗಸ್ಟ್ 2023, 14:33 IST
Last Updated 15 ಆಗಸ್ಟ್ 2023, 14:33 IST
 ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್/ ಬೀಜಿಂಗ್‌ (ಪಿಟಿಐ): ಜಗತ್ತಿನಾದ್ಯಂತ ಭಾರತೀಯರು ತಾವಿರುವ ದೇಶಗಳ ಭಾರತೀಯ ರಾಯಭಾರ ಕಚೇರಿ ಬಳಿ ನೆರೆದು 77ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಿದರು. ಈ ವೇಳೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು.

ವಾಷಿಂಗ್ಟನ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅಮೆರಿಕದ ಜೋ ಬೈಡನ್‌ ಆಡಳಿತವು ಭಾರತೀಯ ಸಮುದಾಯವನ್ನು ಜೊತೆಗೂಡಿತ್ತು. ಭಾರತ ಮತ್ತು ಅಮೆರಿಕದ ಸಂಬಂಧವು ಮೊದಲಿಗಿಂತ ಆಳವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಹೇಳಿದ್ದಾರೆ. 

ಚೀನಾದ ಬೀಜಿಂಗ್‌ನಲ್ಲಿ ಭಾರತ ರಾಯಭಾರ ಕಚೇರಿ ಸಿಬ್ಬಂದಿ ಮತ್ತು ಭಾರತೀಯ ಸಮುದಾಯದ ಸದಸ್ಯರು ಒಟ್ಟಾಗಿ ಸ್ವಾತಂತ್ರ್ಯ ದಿನ ಆಚರಿಸಿದರು. ಶಾಂಘೈನಲ್ಲಿಯ ಭಾರತೀಯ ಕಾನ್ಸುಲ್‌ ಕಚೇರಿಯಲ್ಲಿ ಕಾನ್ಸುಲ್‌ ಜನರಲ್‌ ಎನ್‌. ನಂದಕುಮಾರ್‌ ಅವರು ಧ್ವಜಾರೋಹಣ ನೆರವೇರಿಸಿದರು ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ದಿನದ ಅಂಗವಾಗಿ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣವನ್ನು ಓದಿದರು.

ADVERTISEMENT

ಆಸ್ಟ್ರೇಲಿಯಾದ ಭಾರತ ರಾಯಭಾರಿ ಮನ್‌ಪ್ರೀತ್‌ ವೋಹ್ರಾ ಅವರು ಮುರ್ಮು ಅವರ ಭಾಷಣವನ್ನು ಓದಿದರು. ಬಳಿಕ ಧ್ವಜಾರೋಹಣ ನೆರವೇರಿಸಿದರು.

ಸಿಂಗಪುರದಲ್ಲಿಯೂ ಸಂಭ್ರಮದಿಂದ  ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಸಿಂಗಪುರದ ಭಾರತದ ಪ್ರಭಾರಿ ರಾಯಭಾರಿ ಪೂಜಾ ಎಂ. ತಿಲ್ಲು ಅವರು 1,000ಕ್ಕೂ ಹೆಚ್ಚು ಭಾರತೀಯರನ್ನು ಭಾರತೀಯ ನೌಕಾ ಪಡೆಯ ಐಎನ್‌ಎಸ್‌ ಕುಲಿಶ್‌ ಬಳಿಗೆ ಕರೆದೊಯ್ದಿದ್ದರು. ಸಮರಾಭ್ಯಾಸಕ್ಕಾಗಿ ಸಿಂಗಪುರಕ್ಕೆ ಆಗಮಿಸಿರುವ ಐಎನ್‌ಎಸ್‌ ಕುಲಿಶ್‌ನಲ್ಲಿ ದೇಶಭಕ್ತಿ ಗೀತೆಗಳ ಗಾಯನ ಆಯೋಜಿಲಾಗಿತ್ತು. 

ಶ್ರೀಲಂಕಾ ರಾಯಭಾರಿ ಕಚೇರಿ ಅಧಿಕಾರಿಗಳು ಭಾರತೀಯ ಶಾಂತಿ ರಕ್ಷಣಾ ಸೇನೆ (ಐಪಿಕೆಎಫ್‌) ಸ್ಮಾರಕಕ್ಕೆ ತೆರಳಿ ಆ ದೇಶದ ಶಾಂತಿ ಮತ್ತು ಏಕತೆಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.