ಬೇಗುಸರಾಯ್ (ಬಿಹಾರ):ಸುಸ್ಥಿತಿಯಲ್ಲಿರುವ ಕುಟುಂಬಗಳ ಮಕ್ಕಳು ಮಿಷನರಿ ಶಾಲೆಗಳಲ್ಲಿ ಕಲಿತು ವಿದೇಶಕ್ಕೆ ಹೋಗಿ ಅಲ್ಲಿ ಬೀಫ್ ಸೇವಿಸುತ್ತಾರೆ. ನಾವು ನಮ್ಮ ಸಂಸ್ಕಾರವನ್ನು ಅವರ ಮನಸ್ಸಲ್ಲಿ ನೆಲೆಯೂರುವಂತೆ ಮಾಡಿಲ್ಲ. ಹಾಗಾಗಿ ಅವರು ಬೀಫ್ ಸೇವಿಸುತ್ತಾರೆ ಎಂದು ಬೇಗುಸರಾಯ್‌ಯ ಬಿಜೆಪಿ ಸಂಸದ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
'ಕಾವಿ ಅಜೆಂಡಾ' ಹೇರುತ್ತಿದ್ದಾರೆ ಎಂಬ ಆರೋಪಗಳು ಬಾರದಂತೆ ತಡೆಯಲು ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಕಲಿಕೆ ಇರುವಂತೆ ಖಾಸಗಿ ಶಾಲೆಗಳಲ್ಲಿಯೂ ಭಗವದ್ಗೀತೆ ಕಲಿಸಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.
ಮಿಷನರಿಗಳು ನಡೆಸುತ್ತಿರುವ ಶಾಲೆಗಳಲ್ಲಿ ಕಲಿತ ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಉದ್ಯೋಗವನ್ನರಸಿ ವಿದೇಶಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದ ನಂತರ ಅವರು ಅಲ್ಲಿ ಬೀಫ್ ಸೇವಿಸುತ್ತಾರೆ. ಯಾಕೆ? ಯಾಕೆಂದರೆ ನಾವು ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರವನ್ನು ನೆಲೆವೂರುವಂತೆ ಮಾಡಿಲ್ಲ ಎಂದು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್ ಹೇಳಿದ್ದಾರೆ.
ಅದೇ ವೇಳೆ ದೇಶದಲ್ಲಿರುವ ಅಲ್ಪ ಸಂಖ್ಯಾತರ ವಿರುದ್ಧ ಕಿಡಿ ಕಾರಿದ ಸಿಂಗ್, ನಾವು ಇರುವೆಗಳಿಗೆ ಸಕ್ಕರೆ ಮತ್ತು ಹಾವುಗಳಿಗೆ ಹಾಲು ನೀಡುತ್ತೇವೆ. ಆದರೆ ಹಾವುಗಳು ಭಯ ಹುಟ್ಟಿಸುತ್ತವೆ ಎಂದಿದ್ದಾರೆ.
ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ಮೇಲೆ ತಾರತಮ್ಯ ಮಾಡುತ್ತದೆ ಎಂಬ ಸುದ್ದಿಯೇದೇಶದಾದ್ಯಂತ ಪ್ರತಿಭಟನೆಗೆ ಪ್ರಚೋದನೆ ನೀಡಿತು ಎಂದಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮಂದಿ ಸಾವಿಗೀಡಾದರು. ಈ ಬಗ್ಗೆ ಸಿಂಗ್ ಅವರಲ್ಲಿ ಕೇಳಿದಾಗ ದೇಶವನ್ನು ದುರ್ಬಲಗೊಳಿಸಲಿಕ್ಕಾಗಿ ಪಾಕಿಸ್ತಾನ ನಡೆಸಿದ ಪ್ರಾಯೋಜಿತ ದಾಳಿ ಇದು ಎಂದು ಅವರು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.