ಇದ್ದವನಿಗೆ ಇನ್ನಷ್ಟು ಸೇರುತ್ತದೆ ಎಂಬ ಮಾತಿದೆ. ಎಲ್ಲೆಡೆ ಆರ್ಥಿಕ ಹಿಂಜರಿತದ ಚರ್ಚೆ. ಬೃಹತ್ ಕಂಪನಿಗಳೇ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಆದಾಗ್ಯೂ ದೇಶದ ಕುಬೇರರ ಸಂಪತ್ತು ಮಾತ್ರ ಎಳ್ಳಷ್ಟು ಕರಗಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚಾಗಿದೆ. ಫೋರ್ಬ್ಸ್ ನಿಯತಕಾಲಿಕೆಯ ಪಟ್ಟಿ ಪ್ರಕಾರ ದೇಶದ ಅತ್ಯಂತ ಶ್ರೀಮಂತರಾದ ಗೌತಮ್ ಅದಾನಿ ಪ್ರಪಂಚದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ದೇಶದ ಶ್ರೀಮಂತರ ಸ್ವತ್ತಿನಲ್ಲಿ ಅದಾನಿ ಮತ್ತು ಮುಕೇಶ್ ಅಂಬಾನಿ ಪಾಲು ಶೇ.30ರಷ್ಟಿದೆ.
ದೇಶದ 100 ಅತ್ಯಂತ ಶ್ರೀಮಂತರ ಸ್ವತ್ತು 25 ಶತಕೋಟಿ ಡಾಲರ್ ಏರಿಕೆಯಾಗಿದ್ದು 800 ಶತಕೋಟಿ ಡಾಲರ್ ದಾಟಿದೆ. ಇದರ ಪರಿಣಾಮವಾಗಿ ಕೋವಿಡ್ ಬಳಿಕ ಭಾರತವು 5ನೇ ಬೃಹತ್ ಆರ್ಥಿಕ ರಾಷ್ಟ್ರವಾಗಿದೆ. ದೇಶದ 10 ಶ್ರೀಮಂತರ ಸ್ವತ್ತು 385 ಶತಕೋಟಿ ಡಾಲರ್.
ಗೌತಮ ಅದಾನಿ ಆದಾಯ 2021ರಲ್ಲಿ ಮೂರುಪಟ್ಟು ಹೆಚ್ಚಾಗಿದ್ದು ವರದಿ ಪ್ರಕಾರ 2022ರಲ್ಲಿ ಅವರ ಆದಾಯವನ್ನು 150 ಶತಕೋಟಿ ಡಾಲರ್ ಹೆಚ್ಚಿಸಿಕೊಂಡಿದ್ದಾರೆ. ಗುಜರಾತ್‌ನ ಮುಂದ್ರಾದಲ್ಲಿ ಬೃಹತ್ ಬಂದರು ಹೊಂದಿರುವ ಅದಾನಿ ಸಮೂಹದ ಮಾಲೀಕರ ಆದಾಯ ₹1,211,460 ಕೋಟಿ.
ದೇಶದ ಎರಡನೆ ಅತ್ಯಂತ ಶ್ರೀಮಂತ ರಿಲಯನ್ಸ್ ಇಂಡಸ್ಟ್ರಿಸ್‌ನ ಮುಕೇಶ್ ಅಂಬಾನಿ 88 ಶತಕೋಟಿ ಡಾಲರ್ ಆದಾಯ ಹೊಂದಿದ್ದಾರೆ. ಅವರ ಆದಾಯ ಶೇ.5ರಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಡಿಮಾರ್ಟ್‌ನ ರಾಧಾಕಿಶನ್ ದಮ್ಲಾನಿ ದೇಶದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು 27.6 ಶತಕೋಟಿ ಆದಾಯ ಹೊಂದಿದ್ದಾರೆ. ಸೈರಸ್ ಪೂನಾವಾಲಾ ಸ್ವತ್ತು 21.5 ಶತಕೋಟಿ ಡಾಲರ್.
ಜಿಂದಾಲ್ ಸಮೂಹದ ಸಾವಿತ್ರಿ ಜಿಂದಾಲ್ 16.4 ಶತಕೋಟಿ ಡಾಲರ್ ಆದಾಯ ಹೊಂದಿದ್ದು, ಶತಕೋಟಿ ಹೊಂದಿರುವ ದೇಶದ ಏಕೈಕ ಮಹಿಳೆಯಾಗಿದ್ದಾರೆ. ಆನಂದ್ ಮಹೀಂದ್ರ ಕೂಡ ಟಾಪ್–10 ಶ್ರೀಮಂತರ ಪಟ್ಟಿಗೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.