ನವದೆಹಲಿ: ದೇಶದಲ್ಲಿ ಕೋವಿಡ್–19 ಸಂಬಂಧಿತ ಕಾರಣಗಳಿಂದ ಸಾವಿಗೀಡಾಗುತ್ತಿರುವ ಪ್ರಮಾಣದಲ್ಲಿ ಇಳಿಕೆಯಾಗಿದೆ ಹಾಗೂ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ 64ಕ್ಕಿಂತಲೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜೂನ್ 18ರವರೆಗೂ ಶೇ 3.33ರಷ್ಟಿದ್ದ ಕೋವಿಡ್‌ನಿಂದ ಸಂಭವಿಸಿದ ಸಾವು ಪ್ರಮಾಣ ಈಗ ಶೇ 2.25ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 35,176 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೂ ಒಟ್ಟು 9,52,743 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ 4,96,988 ಸಕ್ರಿಯ ಪ್ರಕರಣಗಳಿವೆ.
ಭಾರತ ಜಗತ್ತಿನಲ್ಲೇ ಅತಿ ಕಡಿಮೆ ಸಾವಿನ ಪ್ರಮಾಣ ಹೊಂದಿದೆ. ಹೆಚ್ಚೆಚ್ಚು ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸುವ ಮೂಲಕ ಬಹುಬೇಗ ಚಿಕಿತ್ಸೆಗೆ ಒಳಪಡಿಸುವ ಅವಕಾಶ ಸಿಗುತ್ತಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಮನೆಗೂ ತೆರಳಿ ಸಮೀಕ್ಷೆ ನಡೆಸುತ್ತಿರುವುದು, ಗುಣಮಟ್ಟದ ಚಿಕಿತ್ಸೆ ನಿರ್ವಹಣೆ, ಸಂಪರ್ಕ ಪತ್ತೆ ಕಾರ್ಯ, ಕಂಟೈನ್‌ಮೆಂಟ್ ಮತ್ತು ಬಫರ್ ವಲಯಗಳಲ್ಲಿ ನಿಗಾವಹಿಸುವ ಮೂಲಕ ಸಾವಿನ ಸಂಖ್ಯೆ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದನ್ನು ತಪ್ಪಿಸಲು ಸೋಂಕು ಲಕ್ಷಣಗಳು ಇರದ ರೋಗಿಗಳಿಗೆ ಮನೆಯಲ್ಲೇ ಪ್ರತ್ಯೇಕವಾಗಿ ವಾಸಿಸುವಂತೆ ಸೂಚಿಸಲಾಗುತ್ತಿದೆ. ಸತತ ಐದನೇ ದಿನ ಭಾರತದಲ್ಲಿ ನಿತ್ಯ ಗುಣಮುಖರಾಗುತ್ತಿರುವವರ ಸಂಖ್ಯೆ 30,000 ದಾಟಿದೆ. ಜೂನ್ ಮಧ್ಯದಲ್ಲಿ ಶೇ 53ರಷ್ಟಿದ್ದ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ, ಮಂಗಳವಾರ (ಜುಲೈ 28) ಶೇ 64.24ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಮಂಗಳವಾರ ಬೆಳಿಗ್ಗೆ 8ರ ವರದಿ ಪ್ರಕಾರ, ದೇಶದಲ್ಲಿ ಒಂದೇ ದಿನ 47,703 ಕೋವಿಡ್ ದೃಢಪಟ್ಟ ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ 654 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು 14,83,156 ಪ್ರಕರಣಗಳು ದಾಖಲಾಗಿದ್ದು, 33,425 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.