ನವದೆಹಲಿ: ಕಳೆದ ವಾರ ದೇಶದಲ್ಲಿ ಕೋವಿಡ್‌ನಿಂದ ನಿತ್ಯ ಸರಾಸರಿ 34,000 ಜನ ಗುಣಮುಖರಾಗಿದ್ದಾರೆ ಹಾಗೂ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ನಿರಂತರವಾಗಿ ಹೆಚ್ಚಳವಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
ಏಪ್ರಿಲ್‌ನಲ್ಲಿ ಶೇ 7.85ರಷ್ಟಿದ್ದ ಕೋವಿಡ್ ರೋಗಿಗಳ ಮುಖಗುಣ ಪ್ರಮಾಣ, ಇಂದು ಶೇ 64.4ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಹದಿನಾರು ರಾಜ್ಯಗಳಲ್ಲಿನ ಗುಣಮುಖ ಪ್ರಮಾಣ ದೇಶದ ಸರಾಸರಿ ಚೇತರಿಕೆ ಪ್ರಮಾಣಕ್ಕಿಂತಲೂ ಹೆಚ್ಚಿದೆ. ದೆಹಲಿಯಲ್ಲಿ ಸೋಂಕಿನಿಂದ ಶೇ 88ರಷ್ಟು ಜನ ಗುಣಮುಖರಾಗಿದ್ದಾರೆ. ಲಡಾಕ್‌ನಲ್ಲಿ ಶೇ 80, ಹರಿಯಾಣದಲ್ಲಿ ಶೇ 78, ಅಸ್ಸಾಂನಲ್ಲಿ ಶೇ 76, ತೆಲಂಗಾಣದಲ್ಲಿ ಶೇ 74, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಶೇ 73, ರಾಜಸ್ಥಾನದಲ್ಲಿ ಶೇ 70, ಮಧ್ಯ ಪ್ರದೇಶದಲ್ಲಿ ಶೇ 69 ಹಾಗೂ ಗೋವಾದಲ್ಲಿ ಶೇ 68ರಷ್ಟು ಚೇತರಿಕೆ ಪ್ರಮಾಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಜೂನ್ 4ಕ್ಕೆ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾದವರ ಸಂಖ್ಯೆ ಒಂದು ಲಕ್ಷ ತಲುಪಿದ್ದು, ಆ ಸಂಖ್ಯೆ ಜೂನ್ 25ಕ್ಕೆ 3,47,978 ಮುಟ್ಟಿತು. ಜುಲೈ 29ರಂದು ದೇಶದಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 10 ಲಕ್ಷ ದಾಟಿತು. ಪ್ರಸ್ತುತ 10,20,582 ಮಂದಿ ಗುಣಮುಖರಾಗಿದ್ದು, 5,28,242 ಸಕ್ರಿಯ ಪ್ರಕರಣಗಳಿವೆ.
ಕಠಿಣ ಸಮಯದಲ್ಲಿ ಸಹಕಾರ ನೀಡುತ್ತಿರುವ ವೈದ್ಯಕೀಯ ಮತ್ತು ಆರೋಗ್ಯ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋವಿಡ್‌ನಿಂದ ಸಾವಿಗೀಡಾಗುತ್ತಿರುವವರ ಪ್ರಮಾಣ ಶೇ 2.21ಕ್ಕೆ ಇಳಿಕೆಯಾಗಿದೆ. ಜೂನ್‌ನಲ್ಲಿ ಸಾವಿನ ಪ್ರಮಾಣ ಶೇ 3.33ರಷ್ಟಿತ್ತು ಎಂದಿದ್ದಾರೆ.
ಆರ್‌ಟಿ–ಪಿಸಿಆರ್ ಮತ್ತು ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳು ಸೇರಿದಂತೆ ದೇಶದಲ್ಲಿ ಸುಮಾರು 1.81 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ ದೇಶದಲ್ಲಿ ನಿತ್ಯ 10 ಲಕ್ಷ ಜನರ ಪೈಕಿ 324 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವಂತೆ ಪ್ರತಿ 10 ಲಕ್ಷ ಜನರ ಪೈಕಿ ಕನಿಷ್ಠ 140 ಪರೀಕ್ಷೆಗಳನ್ನು ನಡೆಸಬೇಕಿದೆ. ಆದರೆ, ಭಾರತದಲ್ಲಿ ಪರೀಕ್ಷೆ ಪ್ರಮಾಣ ಅದಕ್ಕಿಂತಲೂ ಮುಂದಿದೆ. ಜುಲೈ 25, 26 ಹಾಗೂ 27ರಂದು ಐದು ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಎರಡು ಲಸಿಕೆಗಳು ಒಂದು ಮತ್ತು 2ನೇ ಹಂತದ ಮನುಷ್ಯನ ಮೇಲಿನ ಪ್ರಯೋಗ ನಡೆಸುತ್ತಿವೆ. ಮೊದಲ ಹಂತದ ಪ್ರಯೋಗ 8 ಸಂಸ್ಥೆಗಳಲ್ಲಿ ಒಟ್ಟು 1,1150 ವ್ಯಕ್ತಿಗಳ ಮೇಲೆ ನಡೆಯುತ್ತಿದೆ ಹಾಗೂ 2ನೇ ಹಂತರದ ಪ್ರಯೋಗ 5 ಸಂಸ್ಥೆಗಳಲ್ಲಿ 1,000 ವ್ಯಕ್ತಿಗಳ ಮೇಲೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.