ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಕೋವಿಡ್–19 ಲಸಿಕೆಯ ತುರ್ತು ಬಳಕೆಗೆ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿಯಿಂದ ಶುಕ್ರವಾರ ಅನುಮೋದನೆ ದೊರೆತಿದೆ.
ಬ್ರಿಟನ್ ಮತ್ತು ಅರ್ಜೆಂಟಿನಾ ಈಗಾಗಲೇ ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್‌ನ 'ಕೋವಿಶೀಲ್ಡ್' ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿವೆ.
ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ವಿಷಯ ತಜ್ಞರ ಸಮಿತಿಯು (ಎಸ್‌ಇಸಿ) ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ. ಭಾರತದಲ್ಲಿ ಲಸಿಕೆ ತಯಾರಿಕೆಗೆ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಸ್ಟ್ರಾಜೆನಿಕಾದೊಂದಿಗೆ ಕೈಜೋಡಿಸಿದೆ.
ಭಾರತೀಯ ಔಷಧ ಮಹಾನಿಯಂತ್ರಕರಿಂದ (ಡಿಜಿಸಿಐ) ಕೋವಿಶೀಲ್ಡ್ ಬಳಕೆಗೆ ಸಮ್ಮತಿ ದೊರೆತರೆ, ದೇಶದಲ್ಲಿ ಅನುಮತಿ ಪಡೆದ ಮೊದಲ ಲಸಿಕೆಯಾಗಲಿದೆ.
ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಹಾಗೂ ಫೈಝರ್ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯ ತುರ್ತು ಬಳಕೆ ಮನವಿಯನ್ನೂ ಸಮಿತಿಯು ಪರಿಗಣಿಸಿದ್ದು, ಪರಿಶೀಲನೆ ನಡೆಸಲಾಗಿದೆ.
ಭಾರತದಲ್ಲಿ ಜನವರಿ 2ರಂದು ಕೋವಿಡ್ ಲಸಿಕಾ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರದ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಸೂಚಿಸಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಿಸಲು ಸರ್ಕಾರವು ಸಿದ್ಧತೆ ಮಾಡುತ್ತಿದೆ.
ದೇಶದ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಎರಡು ಕೋಟಿ ಸಿಬ್ಬಂದಿ ಹಾಗೂ ಹೆಚ್ಚು ಅಪಾಯಕ್ಕೆ ಒಳಗಾಗಬಹುದಾದ 27 ಕೋಟಿ ನಾಗರಿಕರಿಗೆ ಅವುಗಳನ್ನು ನೀಡಲು ಸಚಿವಾಲಯ ಉದ್ದೇಶಿಸಿದೆ.
60 ಸಾವಿರ ಮಂದಿಗೆ ತರಬೇತಿ
ಲಸಿಕಾ ಕಾರ್ಯಕ್ರಮಕ್ಕಾಗಿ ಈಗಾಗಲೇ 60,000 ವ್ಯಾಕ್ಸಿನೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ 2,360 ಮಂದಿ ರಾಷ್ಟ್ರಮಟ್ಟದಲ್ಲಿ ತರಬೇತಿ ಪಡೆದಿದ್ದಾರೆ.
ಚುಚ್ಚುಮದ್ದು ನೀಡುವ ಸುಮಾರು 57,000 ಮಂದಿಗೆ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಒಟ್ಟಾರೆ 96,000 ಮಂದಿಗೆ ಲಸಿಕಾ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.