ಅಹಮದಾಬಾದ್: ‘ಕೋವಿಡ್–19ನಿಂದ ಉಂಟಾದ ಪರಿಣಾಮವನ್ನು ಹೋಲಿಸಿದರೆ, ದೇಶದ ಆರ್ಥಿಕತೆಯು ಅತಿ ಹೆಚ್ಚು ವೇಗದಲ್ಲಿ ಚೇತರಿಸಿಕೊಂಡಿದೆ. ವಿಶ್ವದ ದೊಡ್ಡ ದೇಶಗಳು ಸಾಂಕ್ರಾಮಿಕದಿಂದ ತಮ್ಮನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಭಾರತವು ಸುಧಾರಣಾ ಕಾರ್ಯಗಳಲ್ಲಿ ನಿರತವಾಗಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
‘ಸರ್ಧಾರ್‌ಧಾಮ್ ಭವನ’ವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,‘ ಕೋವಿಡ್–19 ಭಾರತ ಸೇರಿದಂತೆ ಸಂಪೂರ್ಣ ವಿಶ್ವದ ಮೇಲೆ ಪರಿಣಾಮ ಬೀರಿತು. ಆದರೆ, ನಮ್ಮ ಆರ್ಥಿಕತೆಯು ಸಾಂಕ್ರಾಮಿಕದಿಂದ ಉಂಟಾದ ಪರಿಣಾಮಕ್ಕಿಂತ ಬಲಿಷ್ಠವಾಗಿ ಚೇತರಿಸಿಕೊಂಡಿದೆ’ ಎಂದರು.
‘ಜಾಗತಿಕ ಪೂರೈಕೆ ಸರಪಳಿಗಳು ಅಸ್ತ್ರವ್ಯಸ್ತಗೊಂಡಿರುವ ಸಮಯದಲ್ಲಿ ನಾವು ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ’ಯನ್ನು (ಪಿಎಲ್‌ಐ) ಪರಿಚಯಿಸುವ ಮೂಲಕ ಹೊಸ ಅವಕಾಶಗಳನ್ನು ಕಲ್ಪಿಸಿದೆವು. ಈ ಯೋಜನೆಯನ್ನು ಜವಳಿ ಕ್ಷೇತ್ರಕ್ಕೆ ವಿಸ್ತರಿಸಲಾಗಿದ್ದು, ಸೂರತ್‌ನಂತಹ ನಗರಗಳು ಈ ಯೋಜನೆಯ ಗರಿಷ್ಠ ಲಾಭವನ್ನು ಪಡೆಯಬಹುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.