ADVERTISEMENT

World Environment Day: 2025ರಲ್ಲಿ ಪೆಟ್ರೋಲ್‌ನಲ್ಲಿ ಶೇ 20 ಎಥೆನಾಲ್: ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 2:47 IST
Last Updated 6 ಜೂನ್ 2022, 2:47 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ತೈಲ ಆಮದು ಅವಲಂಬನೆ ತಗ್ಗಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ 2025–26ರ ಹೊತ್ತಿಗೆ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ.

ಪೆಟ್ರೋಲ್‌ನಲ್ಲಿ ಶೇ 10ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿಯನ್ನು ಐದು ತಿಂಗಳ ಮೊದಲೇ ಸಾಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದರು.

ಕಬ್ಬು ಮತ್ತು ಇತರ ಕೃಷಿ ಉತ್ಪನ್ನಗಳಿಂದ ತೆಗೆದ ಎಥೆನಾಲ್‌ ಅನ್ನು ಪೆಟ್ರೋಲ್‌ಗೆ ಶೇ 10ರಷ್ಟು ಮಿಶ್ರಣ ಮಾಡಲು 2022ರ ನವೆಂಬರ್‌ನ ಗಡುವು ಇರಿಸಿಕೊಳ್ಳಲಾಗಿತ್ತು. ಆದರೆ ಅದನ್ನು ಜೂನ್‌ ಹೊತ್ತಿಗೆ ಸಾಧಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ ಮತ್ತು ಹಿಂದುಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ.ನ ಪ್ರಯತ್ನದಿಂದ ಇದು ಸಾಧ್ಯವಾಯಿತು ಎಂದು ಸರ್ಕಾರದ ಪ್ರಕಟಣೆಯು ತಿಳಿಸಿದೆ.

ADVERTISEMENT

ಎಥೆನಾಲ್‌ ಮಿಶ್ರಣ ಮಾಡುವುದರಿಂದ ವಾರ್ಷಿಕ ₹41,500 ಕೋಟಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ, ಇದರಿಂದಾಗಿ ರೈತರಿಗೆ ₹40,600 ಕೋಟಿಯನ್ನು ತ್ವರಿತವಾಗಿ ವಿತರಿಸಲು ಸಾಧ್ಯವಾಗಿದೆ. ಜತೆಗೆ, ಹಸಿರು ಮನೆ ಅನಿಲ ಹೊರಸೂಸುವಿಕೆ 27 ಲಕ್ಷ ಟನ್‌ಗಳಷ್ಟು ಕಡಿಮೆಯಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಅಮೆರಿಕ, ಬ್ರೆಜಿಲ್‌, ಐರೋ‍ಪ್ಯ ಒಕ್ಕೂಟ ಮತ್ತು ಚೀನಾ ಬಳಿಕ ಅತಿ ಹೆಚ್ಚು ಎಥೆನಾಲ್‌ ಉತ್ಪಾದಿಸುವ ಐದನೇ ದೇಶ ಭಾರತ.

ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ ಮಾಡುವುದರಿಂದ ನವೀಕರಿಸಬಹುದಾದ ಇಂಧನ ಬಳಕೆಯ ಪ್ರಮಾಣವನ್ನು ಹೆಚ್ಚಿಸಿದಂತಾಗುತ್ತದೆ. ಹೆಚ್ಚುವರಿಯಾಗಿ ಇರುವ ಅಕ್ಕಿ ಮತ್ತು ಹಾಳಾದ ಧಾನ್ಯಗಳನ್ನು ಎಥೆನಾಲ್‌ ಉತ್ಪಾದಿಸಲು ಬಳಸಬಹುದಾಗಿದೆ.

ಶೇ 20ರಷ್ಟು ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ ಕೆಲವು ಪೆಟ್ರೋಲ್‌ ಪಂಪ್‌ಗಳಲ್ಲಿ 2023ರ ಏಪ್ರಿಲ್‌ನಿಂದಲೇ ಲಭ್ಯ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮಣ್ಣು ಸಂರಕ್ಷಣೆ ಮಹತ್ವ ಸಾರಿದ ಪ್ರಧಾನಿ ಮೋದಿ
‘ಮಣ್ಣು ಸಂರಕ್ಷಣೆ ಅಭಿಯಾನ’ದಅಂಗವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಣ್ಣಿನ ಸಂರಕ್ಷಣೆಗೆ ಐದು ಅಂಶಗಳು ಮುಖ್ಯ ಎಂದರು. ಮಣ್ಣಿನಲ್ಲಿ ಬದುಕುವ ಜೀವಿಗಳನ್ನು ಉಳಿಸಲು ಅದನ್ನು ರಾಸಾಯನಿಕಗಳಿಂದ ಮುಕ್ತಗೊಳಿಸುವುದು, ಮಣ್ಣಿನಲ್ಲಿ ತೇವಾಂಶ ಉಳಿಯುವಂತೆ ನೋಡಿಕೊಳ್ಳುವುದು, ನೀರಿನ ಲಭ್ಯತೆಯನ್ನು ಹೆಚ್ಚಿಸುವುದು, ನೀರಿನ ಕೊರತೆಯಿಂದ ಮಣ್ಣಿಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟುವುದು, ಅರಣ್ಯಗಳ ನಾಶದಿಂದ ಉಂಟಾಗುತ್ತಿರುವ ಮಣ್ಣಿನ ಸವಕಳಿಯನ್ನು ನಿಯಂತ್ರಣ ಅತಿಮುಖ್ಯ ಕ್ರಮಗಳು ಎಂದು ವಿವರಿಸಿದರು.

ಮಣ್ಣಿನ ವಿಧಗಳು ಯಾವುವು, ಮಣ್ಣಿನಲ್ಲಿ ಯಾವ ಅಂಶಗಳ ಕೊರತೆಯಿದೆ, ಅದು ಎಷ್ಟು ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು ಎಂಬ ಮಾಹಿತಿಗಳು ದೇಶದ ರೈತರಿಗೆ ಲಭ್ಯವಿರಲಿಲ್ಲ. ಸರ್ಕಾರವು ಮಣ್ಣಿನ ಆರೋಗ್ಯ ಕಾರ್ಡ್ ಅಭಿಯಾನ ಆರಂಭಿಸಿದ ಬಳಿಕ, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಅವರು ಹೇಳಿದರು.

ನೈಸರ್ಗಿಕ ಕೃಷಿಯು ನಮ್ಮ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. 2030ರೊಳಗೆ 2.6 ಕೋಟಿ ಹೆಕ್ಟೇರ್ ಬರಡು ಭೂಮಿಯನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸಲಾಗುವುದು ಎಂದರು.

*
ನೀರು, ಗಾಳಿ ಮನುಷ್ಯನಿಗೆ ದೊರೆತಿರುವ ಅದ್ಭುತ ಕೊಡುಗೆಗಳಾಗಿದ್ದು, ಅವುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ನಾವು ತಂದುಕೊಳ್ಳಬಾರದು.
-ನ್ಯಾ. ಆದರ್ಶ ಕುಮಾರ್ ಗೋಯಲ್, ಎನ್‌ಜಿಟಿ ಮುಖ್ಯಸ್ಥ

*
ಮೋದಿ ಅವರು ದೇಶದ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಿದ್ದಾರೆ. ಆದರೂ ತಾವು ಪರಿಸರ ಸಂರಕ್ಷಣೆಯ ಚಾಂಪಿಯನ್ ಎಂಬುದಾಗಿ ಜಾಗತಿಕ ವೇದಿಕೆಗಳಲ್ಲಿ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ
-ಜೈರಾಂ ರಮೇಶ್, ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.