ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಆ.23ರನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ್ದು, ಇಂದು (ಆ.23) ಭಾರತವು ಮೊದಲ ‘ಬಾಹ್ಯಾಕಾಶ ದಿನ’ ಸಂಭ್ರಮದಲ್ಲಿದೆ.
2023ರ ಆ.23ರಂದು ಭಾರತದ ಪ್ರಮುಖ ಬಾಹ್ಯಾಕಾಶ ಯೋಜನೆ ‘ಚಂದ್ರಯಾನ–3’ ಚಂದ್ರನ ದಕ್ಷಿಣ ಧ್ರುವ ತಲುಪುವ ಮೂಲಕ, ಈ ಸಾಧನೆ ಮಾಡಿದ ಮೊದಲ ದೇಶವೆಂಬ ಖ್ಯಾತಿಗೆ ಭಾರತ ಪಾತ್ರವಾಗಿತ್ತು. ಭಾರತವು ಚಂದ್ರನ ಅಂಗಳದಲ್ಲಿ ಇಳಿದ ನಾಲ್ಕನೇ ದೇಶವಾಗಿದೆ. ಚಂದ್ರಯಾನದ ಯಶಸ್ಸಿನ ನೆನಪಿಗಾಗಿ ಆ.23ರನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಲಾಗಿದೆ.
ಏನಿದು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’?
ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಐತಿಹಾಸಿಕ ದಿನದ ನೆನಪಿಗಾಗಿ ಈ ದಿನವನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುತ್ತಿದೆ. ‘ಚಂದ್ರಯಾನ–3’ ಯೋಜನೆಯು ಚಂದ್ರನ ದಕ್ಷಿಣ ಧ್ರುವ ತಲುಪಿದ ಜಾಗವನ್ನು ಆ.23ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಶಿವ–ಶಕ್ತಿ ಪಾಯಿಂಟ್’ ಎಂದು ಕರೆದಿದ್ದರು ಹಾಗೂ ಆ ದಿನವನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ್ದರು.
ಈ ವರ್ಷದ ಥೀಮ್ ಏನು ?
‘ಚಂದ್ರನನ್ನು ಮುಟ್ಟುವ ಜತೆಗೆ ಜೀವಗಳನ್ನು ಮುಟ್ಟೋಣ; ಭಾರತದ ಬಾಹ್ಯಾಕಾಶ ಯಾನ’ ಎಂಬುದು ಈ ವರ್ಷದ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಥೀಮ್ ಆಗಿದೆ. ಭಾರತದ ಬಾಹ್ಯಾಕಾಶದ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ.
ಭಾರತ್ ಮಂಟಪದಲ್ಲಿ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಆಚರಿಸಲಾಗುತ್ತಿದ್ದು, ಇಸ್ರೊ ವೆಬ್‌ಸೈಟ್ ಹಾಗೂ ಯುಟ್ಯೂಬ್‌ನಲ್ಲಿ ಕಾರ್ಯಕ್ರಮದ ನೇರಪ್ರಸಾರವಿರಲಿದೆ.
ಭಾರತೀಯ ಖಗೋಳ ವಿಜ್ಞಾನ ಸಂಸ್ಥೆ(ಐಐಎ)ಯು ಭಾರತದಲ್ಲಿರುವ ತನ್ನ ವಿವಿಧ ಶಾಖೆಗಳಲ್ಲಿ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಆಚರಿಸುತ್ತಿದ್ದು, ಜನಸಾಮಾನ್ಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ಐಐಎ ಕೋರಮಂಗಲ ಶಾಖೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ‘ಎಕ್ಸ್’ನಲ್ಲಿ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಶುಭಾಶಯ ಕೋರಿದ್ದಾರೆ. ‘ಎಲ್ಲರಿಗೂ ಮೊದಲ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಶುಭಾಶಯಗಳು. ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಸ್ಮರಿಸೋಣ. ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆಯನ್ನು ಅಭಿನಂದಿಸೋಣ. ನಮ್ಮ ಸರ್ಕಾರವು ಬಾಹ್ಯಾಕಾಶ ಯೋಜನೆಗಳಿಗೆ ಸದಾ ಬೆಂಬಲ ನೀಡಿದೆ, ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಯೋಜನೆಗಳಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡಲಿದ್ದೇವೆ’ ಎಂದು ಪೋಸ್ಟ್ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಶೇ 2–3ರಷ್ಟಿದ್ದು, 2030ರ ವೇಳೆಗೆ ಶೇ 8, 2047ರ ವೇಳೆಗೆ ಶೇ 15ಕ್ಕೆ ತಲುಪುವ ಗುರಿಯಿದೆ. ಭಾರತದಲ್ಲಿ ಒಟ್ಟು 300 ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳಿದ್ದು, ಇವುಗಳಲ್ಲಿ ಬಹುತೇಕ ಕಂಪನಿಗಳು ಕಳೆದ ಕೆಲವು ವರ್ಷಗಳಲ್ಲಿ ಆರಂಭಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.