ರಿಯೊ ಡಿ ಜನೈರೊ: ವಿಶ್ವದ ವಿವಿಧೆಡೆ ನಡೆಯುತ್ತಿರುವ ಸಂಘರ್ಷವನ್ನು ಶಮನಗೊಳಿಸಲು ಜಿ20 ರಾಷ್ಟ್ರಗಳು ಒಟ್ಟಾಗಿ ಪ್ರಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಇಲ್ಲಿ ಸೋಮವಾರ ಆರಂಭವಾದ ಜಿ20 ಶೃಂಗದಲ್ಲಿ ಮಾತನಾಡಿದ ಅವರು, ‘ಜಾಗತಿಕ ಸಂಘರ್ಷದಿಂದ ತಲೆದೋರಿರುವ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟುಗಳು ಜಾಗತಿಕ ದಕ್ಷಿಣದ ದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ’ ಎಂದು ಹೇಳಿದರು.
‘ಆದ್ದರಿಂದ ಜಾಗತಿಕ ದಕ್ಷಿಣದ ಸವಾಲುಗಳು ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡಾಗ ಮಾತ್ರ ನಾವು ಇಲ್ಲಿ ನಡೆಸುವ ಚರ್ಚೆಗಳು ಯಶಸ್ವಿಯಾಗುತ್ತವೆ’ ಎಂದು ಪ್ರತಿಪಾದಿಸಿದರು.
'ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿವು ಹಾಗೂ ಬಡತನದ ವಿರುದ್ಧ ಹೋರಾಟ' ಕುರಿತ ಅಧಿವೇಶನದಲ್ಲಿ ಪ್ರಧಾನಿ ಅವರು ಈ ಹೇಳಿಕೆ ನೀಡಿದ್ದಾರೆ. ವಿಶ್ವಸಂಸ್ಥೆ ಒಳಗೊಂಡಂತೆ ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆಗೂ ಅವರು ಕರೆ ನೀಡಿದರು.
‘ನವದೆಹಲಿಯಲ್ಲಿ ನಡೆದ ಕಳೆದ ಶೃಂಗದಲ್ಲಿ ಆಫ್ರಿಕನ್ ಯೂನಿಯನ್‌ಗೆ ಜಿ20ಯ ಶಾಶ್ವತ ಸದಸ್ಯತ್ವವನ್ನು ನೀಡುವ ಮೂಲಕ ಜಾಗತಿಕ ದಕ್ಷಿಣದ ಧ್ವನಿಗೆ ಹೆಚ್ಚಿನ ಬಲ ನೀಡಿದ್ದೆವು. ಇದೀಗ ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆಗೆ ಮುಂದಾಗುತ್ತೇವೆ’ ಎಂದರು.
ಹಸಿವು ಮತ್ತು ಬಡತನದ ವಿರುದ್ಧದ ಹೋರಾಟಕ್ಕೆ ಬ್ರೆಜಿಲ್ ಆರಂಭಿಸಿರುವ ‘ಜಾಗತಿಕ ಮೈತ್ರಿ’ ಉಪಕ್ರಮವನ್ನು ಭಾರತ ಬೆಂಬಲಿಸಲಿದೆ ಎಂದು ಮೋದಿ ಹೇಳಿದರು.
ಕಳೆದ ಬಾರಿಯ ಶೃಂಗದ ಪ್ರಮುಖ ಆಶಯ ಘೋಷಣೆಯಾದ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದು ಈ ಬಾರಿಯೂ ಪ್ರಸ್ತುತವಾಗಿದೆ ಎಂದರು.
ಮೋದಿ– ಬೈಡನ್ ಭೇಟಿ: ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಬಂದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.