ಬೆಂಗಳೂರು: ತೇಜಸ್ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಕುರಿತು ನಾಲ್ಕು ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಂಗಳವಾರ ತಿಳಿಸಿದೆ.
ಎಚ್‌ಎಎಲ್ ನಿರ್ಮಿತ ಲಘು ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಕುರಿತು ನಾಲ್ಕು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ರಕ್ಷಣಾ ಉಪಕರಣಗಳ ರಫ್ತು ಪ್ರಮಾಣ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಎಚ್‌ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ. ಬಿ. ಅನಂತಕೃಷ್ಣನ್ ತಿಳಿಸಿದ್ದಾರೆ.
10 ರಿಂದ 20 ತೇಜಸ್ ಲಘು ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಕುರಿತು ಫಿಲಿಪೈನ್ಸ್, ಮಲೇಷ್ಯಾ, ಅರ್ಜೆಂಟೀನಾ, ಈಜಿಪ್ಟ್, ಬೋಟ್ಸ್‌ವಾನಾ ದೇಶಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅನಂತಕೃಷ್ಣನ್ ಹೇಳಿದ್ದಾರೆ.
ಭಾರತವು ರಕ್ಷಣಾ ಸಾಧನಗಳ ಆಮದಿನಲ್ಲಿ ವಿಶ್ವದಲ್ಲೇ ಅತಿದೊಡ್ಡ ಆಮದುದಾರ ದೇಶವಾಗಿದೆ. ಆದರೆ, ಜಾಗತಿಕ ಶಸ್ತ್ರಾಸ್ತ್ರ ರಫ್ತು ಮಾರುಕಟ್ಟೆಯಲ್ಲಿ ತನ್ನ ವಹಿವಾಟನ್ನು ಇನ್ನಷ್ಟೇ ಹೆಚ್ಚಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ 14ನೇ ಆವೃತ್ತಿಯ ‘ಏರೋ ಇಂಡಿಯಾ–2023’ಕ್ಕೆ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘2024-25ರ ವೇಳೆಗೆ ಭಾರತವು 5 ಬಿಲಿಯನ್ ಡಾಲರ್ (₹41.34 ಸಾವಿರ ಕೋಟಿ) ಮೌಲ್ಯದ ರಕ್ಷಣಾ ಸರಕುಗಳನ್ನು ರಫ್ತು ಮಾಡುವ ಗುರಿ ಹೊಂದಿದೆ’ ಎಂದು ತಿಳಿಸಿದ್ದರು.
‘ರಕ್ಷಣಾ ಸರಕುಗಳ ರಫ್ತು ವಲಯದಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ದೇಶವು ಸಾಗುತ್ತಿದೆ. ಸದ್ಯ ₹12.4 ಸಾವಿರ ಕೋಟಿ (1.5 ಬಿಲಿಯನ್ ಡಾಲರ್) ಮೊತ್ತದಷ್ಟು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಈ ವಹಿವಾಟು ಹೆಚ್ಚಿಸುವ ನೀತಿಗಳನ್ನು ರೂಪಿಸಲಾಗಿದೆ’ ಎಂದಿದ್ದಾರೆ.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.