ADVERTISEMENT

ಕ್ಷಿಪಣಿ ವ್ಯವಸ್ಥೆಗಳ ಕಾರ್ಯಕ್ಷಮತೆ ಒರೆಗೆ ಹಚ್ಚುವ ಅಭ್ಯಾಸ್ ತಯಾರಿಕೆಗೆ ಸಿದ್ಧ

ಪಿಟಿಐ
Published 27 ಜೂನ್ 2024, 16:39 IST
Last Updated 27 ಜೂನ್ 2024, 16:39 IST
<div class="paragraphs"><p>ಒಡಿಶಾದ&nbsp; ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ‘ಅಭ್ಯಾಸ್’ ಹೆಸರಿನ ಗುರಿ ಸರಣಿ ಪರೀಕ್ಷೆಯ ದೃಶ್ಯ</p></div>

ಒಡಿಶಾದ  ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ‘ಅಭ್ಯಾಸ್’ ಹೆಸರಿನ ಗುರಿ ಸರಣಿ ಪರೀಕ್ಷೆಯ ದೃಶ್ಯ

   

ಪಿಟಿಐ ಚಿತ್ರ

ನವದೆಹಲಿ: ಕ್ಷಿಪಣಿ ವ್ಯವಸ್ಥೆಗಳ ಕಾರ್ಯಕ್ಷಮತೆ ಒರೆಗೆ ಹಚ್ಚಲು ಬಳಸುವ, ಆಗಸದಲ್ಲಿ ಅಧಿಕ ವೇಗದಲ್ಲಿ ಚಲಿಸಬಲ್ಲ ‘ಅಭ್ಯಾಸ್’ ಹೆಸರಿನ ಗುರಿಯ ಸರಣಿ ಪರೀಕ್ಷೆಗಳನ್ನು ಒಡಿಶಾ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ನಡೆಸಲಾಗಿದೆ. 

ADVERTISEMENT

ಪರೀಕ್ಷಾರ್ಥ ಪ್ರಯೋಗದ ನಂತರ ಈ ಗುರಿಯನ್ನು (ಅಭ್ಯಾಸ್) ಮತ್ತೆ ಬಳಕೆ ಮಾಡಲಾಗುವುದಿಲ್ಲ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ‘ಅಭ್ಯಾಸ್‌’ ಅನ್ನು ಅಭಿವೃದ್ಧಿಪಡಿಸಿದೆ. ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆ ಪರಿಶೀಲಿಸುವ ಪರೀಕ್ಷೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ‘ಅಭ್ಯಾಸ್‌’ ವ್ಯವಸ್ಥೆಗಳನ್ನು ತಯಾರಿಸಲು ದಾರಿ ಸುಗಮವಾದಂತಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಹಿಂದೆ ಇದೇ ಕ್ಷಿಪಣಿಯನ್ನು ಹತ್ತು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವೇಗ ಹಾಗೂ ಕ್ರಮಿಸಬೇಕಾದ ದೂರದಲ್ಲಿ ಒಂದಷ್ಟು ಸುಧಾರಣೆಯನ್ನು ಮಾಡಿರುವ ಡಿಆರ್‌ಡಿಒ, ಗುರವಾರ ಮತ್ತೊಂದು ಪರೀಕ್ಷೆ ನಡೆಸಿತು. 

‘ರಾಡಾರ್ ವ್ಯವಸ್ಥೆ ಹಾಗೂ ಇನ್‌ಫ್ರಾರೆಡ್‌ಗೂ ಸಿಗದಂತೆ ನಿಖರ ಗುರಿಯತ್ತ ಸಾಗುವ ವ್ಯವಸ್ಥೆ ಅಭ್ಯಾಸ್‌ನಲ್ಲಿ ಅಳವಡಿಸಲಾಗಿದೆ. ಇದನ್ನು ನೈಜ ಅಪಾಯ ಎದುರಾದಂತೆಯೇ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಆಟೊ ಪೈಲಟ್‌ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಸ್ವಯಂಚಾಲಿತ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಲ್ಯಾಪ್‌ಟಾಪ್ ಆಧಾರಿತ ನೆಲದಿಂದ ನಿಯಂತ್ರಣ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ. ಜತೆಗೆ ತನ್ನ ಹಾರಾಟದ ಅವಧಿಯಲ್ಲಿ ಇದು ಮಾಹಿತಿಯನ್ನು ದಾಖಲಿಸಿಕೊಳ್ಳಲಿದ್ದು, ಇದು ಹಾರಾಟದ ನಂತರ ವಿಶ್ಲೇಷಣೆಗೆ ಸಹಕಾರಿಯಾಗಲಿದೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ಕ್ಷಿಪಣಿಗೆ ಅಳವಡಿಸಿದ ಬೂಸ್ಟರ್‌ ಕಾರ್ಯಾಚರಣೆ ಕುರಿತು ತಜ್ಞರು ಪರಿಶೀಲಿಸಿದರು. 30 ನಿಮಿಷಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಎರಡು ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ ಅಧಿಕಾರಿಗಳು, ಸಶಸ್ತ್ರ ಸೇನಾ ದಳ ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.