ನವದೆಹಲಿ: ‘ದೇಶದಲ್ಲಿ ಲಾಜಿಸ್ಟಿಕ್ ವೆಚ್ಚವು ಮುಂದಿನ ಐದು ವರ್ಷಗಳಲ್ಲಿ ಒಂದಂಕಿಗೆ ಕುಸಿಯಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಡೆಲಾಯ್ಟ್ ಸರ್ಕಾರಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೆದ್ದಾರಿ ಸಚಿವಾಲಯವು ಬಹಳಷ್ಟು ಹೆದ್ದಾರಿಗಳನ್ನು ಹಾಗೂ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಾಣ ಮಾಡುತ್ತಿದೆ. ಇದರಿಂದ ಸರಕು ಸಾಗಣೆ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ. ಇದು ಒಂದಂಕಿಗೆ ಕುಸಿಯುವ ವಿಶ್ವಾಸವಿದೆ’ ಎಂದಿದ್ದಾರೆ.
‘ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆಯ ರಾಷ್ಟ್ರೀಯ ಸಮಿತಿಯ ಅಂದಾಜಿನ ಪ್ರಕಾರ, ಸರಕು ಸಾಗಣೆ ವೆಚ್ಚವು 2021–22ರಲ್ಲಿ ಜಿಡಿಪಿಯ ಶೇ 7.8ರಿಂದ ಶೇ 8.9ರಷ್ಟಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಭಾರತದ ಆಟೊಮೊಬೈಲ್ ಕೈಗಾರಿಕೆಯನ್ನು ಜಗತ್ತಿನಲ್ಲೇ ನಂ. 1 ಮಾಡುವ ಗುರಿಯನ್ನು ಹೊಂದಲಾಗಿದೆ’ ಎಂದು ಹೇಳಿದ್ದಾರೆ.
‘2023ರ ದಾಖಲೆಗಳ ಪ್ರಕಾರ ಅಮೆರಿಕ ಹಾಗೂ ಚೀನಾ ನಂತರದಲ್ಲಿ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿದೆ. ಜಪಾನ್ ಅನ್ನು ಭಾರತ ಹಿಂದಿಕ್ಕಿದೆ. 2014ರಲ್ಲಿ ಭಾರತದ ಆಟೊಮೊಬೈಲ್ ಕ್ಷೇತ್ರವು ₹7.5 ಲಕ್ಷ ಕೋಟಿಯ ಮಾರುಕಟ್ಟೆಯಾಗಿತ್ತು. 2024ರಲ್ಲಿ ಈ ಕ್ಷೇತ್ರವು ₹22 ಲಕ್ಷ ಕೋಟಿಯ ವಹಿವಾಟು ನಡೆಸುತ್ತಿದೆ’ ಎಂದು ಗಡ್ಕರಿ ಹೇಳಿದ್ದಾರೆ.
‘ಸದ್ಯ ಭಾರತವು ಸಮಗ್ರ ಆರ್ಥಿಕತೆಯಲ್ಲಿ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಪ್ರಮುಖ ರಾಷ್ಟ್ರವಾಗಿದೆ. ಒಂದೊಮ್ಮೆ ನಾವು ರೈತರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ದೇಶದ ಆರ್ಥಿಕತೆ ಗಣನೀಯವಾಗಿ ಏರಿಕೆಯಾಗಲಿದೆ. ಇದರ ಜತೆಯಲ್ಲೇ ಆಮದು ತಗ್ಗಿಸಿ, ರಫ್ತು ಪ್ರಮಾಣ ಹೆಚ್ಚಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಸ್ಮಾರ್ಟ್ ಸಿಟಿ ಪರಿಕಲ್ಪನೆಯಂತೆಯೇ, ಸ್ಮಾರ್ಟ್ ಗ್ರಾಮಗಳ ಪರಿಕಲ್ಪನೆಯನ್ನು ಜಾರಿಗೆ ತಂದಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. ಯಾವುದೇ ಸಂಸ್ಥೆಯಲ್ಲಾಗಲಿ ಗಳಿಕೆ ಹಾಗು ವೆಚ್ಚ ಕುರಿತು ಲೆಕ್ಕಪರಿಶೋಧನೆ ನಡೆಸುವಂತೆ, ಕಾರ್ಯಕ್ಷಮತೆ ಕುರಿತೂ ನಡೆಸಿದರೆ’ ಪ್ರಗತಿ ಸಾಧ್ಯ ಎಂದು ಗಡ್ಕರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.