ನವದೆಹಲಿ: ಭಾರತದಲ್ಲಿ ಪ್ರಯಾಣಿಕ ವಾಹನಗಳು ಮತ್ತು ಕಾರುಗಳ ಮಾರಾಟ ಪ್ರಮಾಣ ಆಗಸ್ಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ತಿಂಗಳ ಮಾರಾಟದ ಲೆಕ್ಕದಲ್ಲಿ ಆಗಸ್ಟ್‌ನಲ್ಲಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಮಾರಾಟವಾಗಿದೆ. ಪ್ರಯಾಣಿಕ ವಾಹನಗಳ ಮಾರಾಟವು ಆಗಸ್ಟ್‌ನಲ್ಲಿ 31.57ರಷ್ಟು ಕುಸಿದಿದ್ದು, 196524 ವಾಹನಗಳು ಮಾರಾಟಗೊಂಡಿವೆ. ಇನ್ನು ಕಾರುಗಳ ಮಾರಾಟವು ಶೇ. 41.09ರಷ್ಟು ಕುಸಿದಿದ್ದು, ಈ ತಿಂಗಳಲ್ಲಿ ಕೇವಲ 115957 ಕಾರುಗಳಷ್ಟೇ ಮಾರಾಟಗೊಂಡಿವೆ.1997-98ರ ನಂತರದಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ವಾಹನ ಮಾರಾಟ ಕುಸಿದಿದೆ ಎಂದು ಭಾರತೀಯ ಆಟೊಮೊಬೈಲ್ ಉತ್ಪಾದಕ ಸಂಸ್ಥೆಗಳ ಒಕ್ಕೂಟ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.
ಬೇಡಿಕೆಭಾರಿ ಪ್ರಮಾಣದಲ್ಲಿ ಕುಸಿತಗೊಂಡಿರುವುದರಿಂದ ವಾಹನಉತ್ಪಾದಕ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿವೆ. ಹೀಗಾಗಿ ವಾಹನೋದ್ಯಮದ ಚೇತರಿಕೆಗೆ ಕ್ರಮ ಕೈಗೊಳ್ಳಬೇಕೆಂದುಆಗ್ರಹಿಸಿ ವಾಹನ ತಯಾರಕ ಸಂಸ್ಥೆಗಳುಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿವೆ. ಇದರ ಜತೆಜತೆಗೇ ಉತ್ಪಾದಕ ಕ್ಷೇತ್ರದಲ್ಲಿ ಹಲವು ಕಂಪನಿಗಳು ನೌಕರಿ ಕಡಿತಗೊಳಿಸಿವೆ.
ಚೇತರಿಕೆ ಕ್ರಮಕ್ಕೆ ಮನವಿ ಮಾಡಿರುವ ವಾಹನ ತಯಾರಕ ಸಂಸ್ಥೆಗಳಿಗೆ ಭರವಸೆ ನೀಡಿರುವ ಸಾರಿಗೆ ಸಚಿವ ನಿತಿನ್ ಗಡ್ಕರಿ, ಪೆಟ್ರೋಲ್, ಡೀಸೆಲ್ ಮತ್ತು ಹೊಸ ಮಾದರಿಯ ವಾಹನಗಳ ಮೇಲಿನ ತೆರಿಗೆ ಕಡಿತಗೊಳಿಸುವಂತೆ ವಿತ್ತ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.