ADVERTISEMENT

ಅಣ್ವಸ್ತ್ರ ನೀತಿ ಬದಲು: ರಾಜನಾಥ್‌ ಸುಳಿವು

ಮೊದಲು ಬಳಸುವುದಿಲ್ಲ ಎಂಬುದು ಭವಿಷ್ಯದ ಸನ್ನಿವೇಶದ ಮೇಲೆ ಅವಲಂಬಿತ

ಪಿಟಿಐ
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
ವಾಜಪೇಯಿ ಅವರಿಗೆ ರಾಜನಾಥ್‌ ಅವರು ಪೋಖರಣ್‌ನಲ್ಲಿ ನಮನ ಸಲ್ಲಿಸಿದರು –ಪಿಟಿಐ ಚಿತ್ರ
ವಾಜಪೇಯಿ ಅವರಿಗೆ ರಾಜನಾಥ್‌ ಅವರು ಪೋಖರಣ್‌ನಲ್ಲಿ ನಮನ ಸಲ್ಲಿಸಿದರು –ಪಿಟಿಐ ಚಿತ್ರ   

ಜೈಪುರ/ನವದೆಹಲಿ:‘ಮೊದಲುಅಣ್ವಸ್ತ್ರ ಬಳಸುವುದಿಲ್ಲ’ ಎಂಬ ನೀತಿಯನ್ನು ಬದಲಾಯಿಸುವ ಹಕ್ಕು ಭಾರತಕ್ಕೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಪಾದಿಸಿದ್ದಾರೆ. ಅಣ್ವಸ್ತ್ರ ಮೊದಲು ಬಳಸುವುದಿಲ್ಲ ಎಂಬ ನೀತಿಗೆ ದೇಶವು ಬದ್ಧವಾಗಿದೆ. ಆದರೆ, ಭವಿಷ್ಯದ ಸನ್ನಿವೇಶಗಳಿಗೆ ಅನುಗುಣವಾಗಿ ಈ ನೀತಿಯನ್ನು ಬದಲಾಯಿಸಲು ಅವಕಾಶ ಇದೆ ಎಂದು ಅವರು ಹೇಳಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಪೋಖರಣ್‌ಗೆ ರಾಜನಾಥ್‌ ಅವರು ಶುಕ್ರವಾರ ಭೇಟಿ ನೀಡಿದ್ದರು. ಬಳಿಕ ಅವರು ಅಣ್ವಸ್ತ್ರ ನೀತಿಯ ಕುರಿತು ಟ್ವೀಟ್‌ ಮಾಡಿದ್ದಾರೆ.

ಭಾರತವನ್ನು ಅಣ್ವಸ್ತ್ರಶಕ್ತ ದೇಶವಾಗಿಸಬೇಕು ಎಂಬ ಅಟಲ್‌ ಅವರ ದೃಢ ನಿಲುವಿನ ಪರಿಣಾಮವಾಗಿ ಪೋಖರಣ್‌ನಲ್ಲಿ ಪರೀಕ್ಷೆ ನಡೆಯಿತು ಎಂದು ಅವರು ಹೇಳಿದ್ದಾರೆ. ಮೊದಲ ಪುಣ್ಯತಿಥಿಯಂದು ಅಟಲ್‌ ಅವರಿಗೆ ರಾಜನಾಥ್‌ ಅವರು ನಮನ ಸಲ್ಲಿಸಿದರು.

ADVERTISEMENT

ಪಾಕ್‌ಗೆ ಎಚ್ಚರಿಕೆಯೇ?

ಪಾಕಿಸ್ತಾನದ ಜತೆಗಿನ ಸಂಬಂಧ ವಿಷಮ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ರಾಜನಾಥ್‌ ಅವರು ಆ ದೇಶಕ್ಕೆ ಸರಿಯಾದ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಟ್ಟಿದೆ. ಮೋದಿ ನೇತೃತ್ವದ ಸರ್ಕಾರವು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ, ದೇಶವು ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಲು ಸಿದ್ಧ ಎಂಬ ಸಂದೇಶವನ್ನು ನೀಡುತ್ತಲೇ ಬಂದಿದೆ.

ಅಣ್ವಸ್ತ್ರ ನೀತಿಯನ್ನು ಬದಲಾಯಿಸಬೇಕು ಎಂದು ಬಿಜೆಪಿ ಮುಖಂಡರು ಹೇಳುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ ಪರ್‍ರೀಕರ್ ಅವರೂ ದೇಶದ ಅಣ್ವಸ್ತ್ರ ನೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಮೊದಲುಅಣ್ವಸ್ತ್ರ ಬಳಕೆ ಇಲ್ಲ ಎಂಬ ನೀತಿಯು ದುರಂತಕ್ಕೆ ಕಾರಣವಾದೀತು ಎಂದು ನಿವೃತ್ತ ಲೆ. ಜ. ಬಿ.ಎಸ್‌. ನಾಗಪಾಲ್‌ ಅವರೂ ಇತ್ತೀಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.