ADVERTISEMENT

ಭಾರತದ ಭದ್ರತೆಗೆ ಮಗ್ಗುಲ ಮುಳ್ಳಾಗುತ್ತಿದೆ ಚೀನಾ

ಜಲಗಡಿ ಸುತ್ತುವರಿಯಲು ನೆರೆ ರಾಷ್ಟ್ರ ತಂತ್ರ * ಪಾಕ್ ದುಷ್ಕೃತ್ಯಗಳಿಗೂ ಬೆಂಬಲ

ಗಣಪತಿ ಶರ್ಮಾ
Published 25 ಜುಲೈ 2019, 12:04 IST
Last Updated 25 ಜುಲೈ 2019, 12:04 IST
   

ಕಾರ್ಗಿಲ್ಯುದ್ಧವೂ ಸೇರಿದಂತೆ ಪಾಕಿಸ್ತಾನದ ಜತೆ ನಡೆದ ಸೇನಾ ಸಂಘರ್ಷಗಳಲ್ಲಿ ಭಾರತ ಜಯಗಳಿಸಿರುವುದೇನೋ ನಿಜ. ಆದರೆ ದೇಶದ ಭದ್ರತೆ ಎದುರಿಸುತ್ತಿರುವ ಸವಾಲುಗಳು, ಆತಂಕ ಮಾತ್ರ ಕೊನೆಯಾಗಿಲ್ಲ. ಒಂದೆಡೆಭಯೋತ್ಪಾದನೆ, ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ಪಾಕಿಸ್ತಾನವು ಭದ್ರತೆಗೆ ಸವಾಲೊಡ್ಡುತ್ತಿದ್ದರೆ ಮತ್ತೊಂದೆಡೆ ಚೀನಾ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಗಡಿ ವಿವಾದವೂ ಸೇರಿದಂತೆ ಅನೇಕ ವಿಷಯಗಳಲ್ಲಿ ಭಾರತದ ಜತೆ ತಗಾದೆ ತೆಗೆಯುತ್ತಿರುವ ಚೀನಾ, ಪಾಕಿಸ್ತಾನವನ್ನು ಮತ್ತು ಆ ದೇಶ ಪೋಷಿಸುತ್ತಿರುವ ಭಯೋತ್ಪಾದಕರನ್ನು ಬೆಂಬಲಿಸುವ ಮೂಲಕ ಭದ್ರತೆಗೆ ಆತಂಕ ಉಂಟುಮಾಡುತ್ತಿದೆ.

ಪಾಕಿಸ್ತಾನದ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಸ್ತಾವಕ್ಕೆ ನಾಲ್ಕು ಬಾರಿ ಚೀನಾ ತಡೆಯೊಡ್ಡಿತ್ತು.ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಇತರ ಕಾಯಂ ಸದಸ್ಯ ರಾಷ್ಟ್ರಗಳು ಪ್ರಸ್ತಾವಕ್ಕೆ ಸಮ್ಮತಿ ನೀಡಿದ್ದರೂ ಚೀನಾ ಅಡ್ಡಗಾಲಿಟ್ಟಿತ್ತು. ಅಂತೂ ಸತತ ಪ್ರಯತ್ನದ ಬಳಿಕಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ ನೆರವಿನಿಂದ ಚೀನಾ ಮನವೊಲಿಸುವಲ್ಲಿ ಭಾರತ ಯಶಸ್ವಿಯಾಗಿದ್ದು ಈಗ ಇತಿಹಾಸ.

ಪಾಕಿಸ್ತಾನದ ಗ್ವಾದರ್ ಬಂದರಿಗೆ ಸಂಪರ್ಕ ಕಲ್ಪಿಸುವ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಹಾದುಹೋಗುವಸಿಪಿಇಸಿ (ಸುಮಾರು6,200 ಕೋಟಿ ಡಾಲರ್ [ಅಂದಾಜು ₹4.34 ಲಕ್ಷ ಕೋಟಿ] ಮೊತ್ತದ ಚೀನಾ–ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್) ಯೋಜನೆಯಲ್ಲಿ ಚೀನಾ ಹೂಡಿಕೆ ಮಾಡಿರುವುದೂ ಭಾರತದ ಭದ್ರತೆಗೆ ಆತಂಕ ತಂದೊಡ್ಡಿದೆ.

ಪಾಕ್, ಚೀನಾ ಭಾಯಿ ಭಾಯಿ:ಪಾಕಿಸ್ತಾನಕ್ಕೆ ಹಿಂದಿನಿಂದಲೂ ಸದಾ ಹಣಕಾಸು ನೆರವು ನೀಡುತ್ತಿದ್ದ ಅಮೆರಿಕ ಇತ್ತೀಚಿನ ವರ್ಷಗಳಲ್ಲಿ ಅದನ್ನು ಹಂತಹಂತವಾಗಿ ಸ್ಥಗಿತಗೊಳಿಸುತ್ತಾ ಬಂದಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಕುಮ್ಮಕ್ಕನ್ನು ನಿಲ್ಲಿಸದಿರುವುದೇ ಇದಕ್ಕೆ ಪ್ರಮುಖ ಕಾರಣ. ಮತ್ತೊಂದೆಡೆ ಅಮೆರಿಕದ ಜತೆ ಭಾರತದ ಬಾಂಧವ್ಯ ವೃದ್ಧಿಯಾಗುತ್ತಾ ಸಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪಾಕಿಸ್ತಾನಕ್ಕೆ ಚೀನಾ ಹತ್ತಿರವಾಗುತ್ತಿದೆ. ಅತ್ತ ಪಾಕಿಸ್ತಾನಕ್ಕೂ ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾವೊಂದೇಸದ್ಯದ ಆಯ್ಕೆಯಾಗಿದೆ. ಯುದ್ಧ ಸಾಮಗ್ರಿಗಳಿಗೂ ಚೀನಾವನ್ನೇ ನೆಚ್ಚಿಕೊಳ್ಳಬೇಕಾಗಿದೆ.ಇಸ್ಲಾಮಿಕ್ ಸಹಕಾರ ಒಕ್ಕೂಟ (ಒಐಸಿ) ಮತ್ತು ಅಲಿಪ್ತ ಒಕ್ಕೂಟದಲ್ಲಿ ಪಾಕಿಸ್ತಾನ ತನ್ನ ಪರವಾಗಿ ಧ್ವನಿ ಎತ್ತಲಿದೆ ಎಂಬ ಆಶಾಭಾವನೆಯೂ ಚೀನಾವು ಪಾಕಿಸ್ತಾನ ಪರ ಧೋರಣೆ ತಳೆಯುವಂತೆ ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಚಟುವಟಿಕೆ ಕುರಿತು ಅಲಿಪ್ತ ಒಕ್ಕೂಟದಲ್ಲಿ ಈ ಹಿಂದೆ ಆಕ್ಷೇಪ ವ್ಯಕ್ತವಾದಾಗ ಪಾಕಿಸ್ತಾನವು ಚೀನಾ ಪರ ವಕಾಲತ್ತು ವಹಿಸಿತ್ತು. ಒಐಸಿಯಲ್ಲೂ ಚೀನಾ ನಿಲುವುಗಳನ್ನು ಪ್ರಶಂಸಿಸಿ ಮಾತನಾಡಿತ್ತು. ಇವೆಲ್ಲ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿಸಿದೆ. ಆದರೆ ಈ ಬೆಳವಣಿಗೆಗಳು ಭಾರತದ ಭದ್ರತೆಗೆ ತಲೆನೋವಾಗಿ ಪರಿಣಮಿಸಿವೆ.

‘ಭಾರತದ ಅಭಿವೃದ್ಧಿಗೆ ತಡೆಯೊಡ್ಡಬೇಕೆಂಬ ಚೀನಾದ ಕುತಂತ್ರವೇ ಆ ರಾಷ್ಟ್ರವು ಪಾಕಿಸ್ತಾನದ ಉಗ್ರರಿಗೆ ಬೆಂಬಲ ನೀಡಲು ಕಾರಣ. ಭಾರತದ ಅಭಿವೃದ್ಧಿಗೆ ಅಡ್ಡಿಪಡಿಸುವುದಕ್ಕಾಗಿಯೇಈ ಹಿಂದೆ ಪರಮಾಣು ಪೂರೈಕೆದಾರ ರಾಷ್ಟ್ರಗಳ ಒಕ್ಕೂಟದ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ, ಭದ್ರತಾ ಮಂಡಳಿಯ ಕಾಯಂ ಸ್ಥಾನಕ್ಕೆ ಭಾರತದ ಉಮೇದುವಾರಿಕೆಯನ್ನು ಚೀನಾ ವಿರೋಧಿಸಿತ್ತು’ ಎಂದು ಅಂತರಾಷ್ಟ್ರೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಜಲಗಡಿ ಸುತ್ತುವರಿಯಲು ತಂತ್ರ:ಜಲಗಡಿ ಮೂಲಕ ಭಾರತವನ್ನು ಸುತ್ತುವರಿಯಲು ಚೀನಾ ದಶಕಗಳಿಂದ ಪ್ರಯತ್ನಿಸುತ್ತಲೇ ಇದೆ. ಹಿಂದೂ ಮಹಾಸಾಗರದಲ್ಲಿ ಬಹಳ ಹಿಂದಿನಿಂದಲೂ ಚೀನಾದ ಹಾಜರಿ ಇದೆ. ಮ್ಯಾನ್ಮಾರ್‌ನ ಕೊಕೊಸ್ ದ್ವೀಪ, ಶ್ರೀಲಂಕಾದ ಹಂಬಂತೋಟ ಬಂದರು, ಮಾಲ್ಡೀವ್ಸ್‌ನ ಮರವೊ ಅಟಾಲ್, ಪಾಕಿಸ್ತಾನದ ಗ್ವಾದರ್ ಬಂದರು ಮತ್ತು ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಚೀನಾ ನೌಕಾ ನೆಲೆಗಳನ್ನು ಹೊಂದಿದೆ. ಮಾಲ್ಡೀವ್ಸ್‌ ರಾಜಧಾನಿಯಲ್ಲಿ ಸಕ್ರಿಯ ರಾಯಭಾರ ಕಚೇರಿಯನ್ನೂ ಚೀನಾ ಹೊಂದಿದೆ. ಈ ಎಲ್ಲ ಪ್ರದೇಶಗಳಲ್ಲಿನ ಚೀನಾದ ಆಕ್ರಮಣಕಾರಿ ನೀತಿಯು ಭಾರತದ ಜಲಗಡಿ ಭದ್ರತೆಗೆ ಸದಾ ಆತಂಕಕಾರಿಯಾಗಿದೆ. ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾ ಚಟುವಟಿಕೆಗಳಿಗೆ ಚೀನಾ ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ‘ಹಿಂದೂ ಮಹಾಸಾಗರದಲ್ಲಿ ಶಾಂತಿ ಕಾಪಾಡಲು ಭಾರತ ವಿಶೇಷ ಪಾತ್ರವನ್ನು ಹೊಂದಿರುವುದು ನಿಜ. ಆದರೆ ಅದೇ ಕಾರಣಕ್ಕೆ ಹಿಂದೂ ಮಹಾಸಾಗರ ತನ್ನ ‘ಹಿತ್ತಿಲು’ ಎಂದು ಭಾರತ ಭಾವಿಸಿದರೆ ಅದು ಸಂಘರ್ಷಗಳಿಗೆ ಕಾರಣವಾಗಬಹುದು’ ಎಂದು ಚೀನಾ ಸೇನಾ ಅಧಿಕಾರಿಗಳು ಮತ್ತು ತಜ್ಞರು 2015ರ ಜುಲೈನಲ್ಲಿ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಪರ್ಯಾಸವೆಂದರೆ, ಹಿಂದೂ ಮಹಾಸಾಗರದಲ್ಲಿ ಭಾರತದ ಚಟುವಟಿಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾ ತಾನು ಮಾತ್ರ ಸುಮ್ಮನೆ ಕುಳಿತಿಲ್ಲ. ಆ ಪ್ರದೇಶದಲ್ಲಿ ನೌಕಾಪಡೆಯ ಚಟುವಟಿಕೆ ಹೆಚ್ಚುಗೊಳಿಸಿದೆ. ‘ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಚೀನಾದ ನೌಕಾಪಡೆಯ ಚಟುವಟಿಕೆ ಹೆಚ್ಚುತ್ತಿದೆ.ಚೀನಾದ ಹಡಗುಗಳು ಮತ್ತು ಜಲಾಂತರ್ಗಾಮಿಗಳ ನಿಯೋಜನೆ ಬಗ್ಗೆ ಭಾರತ ನಿರಂತರವಾಗಿ ನಿಗಾವಹಿಸಿದೆ’ ಎಂದುನೌಕಾಪಡೆ ಮುಖ್ಯಸ್ಥ ಸುನಿಲ್‌ ಲಾಂಬಾ ಕಳೆದ ತಿಂಗಳು (2019 ಮಾರ್ಚ್‌) ಹೇಳಿರುವುದು ಗಮನಾರ್ಹ.

ಸುಮ್ಮನೆ ಕುಳಿತಿಲ್ಲ ಭಾರತ:ಸಾಗರ ಭದ್ರತೆ ವಿಚಾರದಲ್ಲಿ ಭಾರತ ಕೈಕಟ್ಟಿ ಕುಳಿತಿದೆ ಎಂದೂ ಹೇಳಲಾಗದು. ಜಲಗಡಿ ವಿಚಾರಗಳಿಗೆ ಸಂಬಂಧಿಸಿ ಆಕ್ರಮಣಕಾರಿ ನೀತಿ ಪ್ರದರ್ಶಿಸಿಲ್ಲವಾದರೂ ನೆರೆಯ ಮತ್ತು ಚೀನಾದ ಶತ್ರು ರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಬಹಳ ಹಿಂದಿನಿಂದಲೂ ಕಾರ್ಯಪ್ರವೃತ್ತವಾಗಿದೆ. ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ ಮತ್ತು ಮಧ್ಯ ಏಷ್ಯಾ ಪ್ರದೇಶದಲ್ಲಿ ಚೀನಾದ ನೆರೆ ರಾಷ್ಟ್ರಗಳ ಜತೆಉತ್ತಮ ಸಂಬಂಧ ಹೊಂದಿದೆ.

ವಿಯೆಟ್ನಾಂ ಜತೆ ಭಾರತ ಮಾಡಿಕೊಂಡಿರುವ ಹಲವು ಒಪ್ಪಂದಗಳು ಚೀನಾದ ಕೆಂಗಣ್ಣಿಗೂ ಗುರಿಯಾಗಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ನಿಕ್ಷೇಪ ಪತ್ತೆಹಚ್ಚುವುದಕ್ಕೆ ಸಂಬಂಧಿಸಿ2011ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ವಿಯೆಟ್ನಾಂ ಜತೆ ಒಡಂಬಡಿಕೆ ಮಾಡಿಕೊಂಡಿತ್ತು. ಇದಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಿದೇಶಿ ಕಂಪೆನಿಗಳು ವಿವಾದಾತ್ಮಕ ನೀರಿನ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದು ತಮಗೆ ಇಷ್ಟವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿತ್ತು. ನಂತರ, 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವೂ ವಿಯೆಟ್ನಾಂ ಜತೆಗಿನ ಬಾಂಧವ್ಯ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ. 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಯೆಟ್ನಾಂ ಜತೆ 12 ಒಪ್ಪಂದಗಳಿಗೆ ಸಹಿ ಹಾಕಿತ್ತು. ಇದೇ ವೇಳೆ, ವಿಯೆಟ್ನಾಂ ರಕ್ಷಣಾ ಕ್ಷೇತ್ರಕ್ಕೆ ₹3,300 ಕೋಟಿ ಆರ್ಥಿಕ ನೆರವು ನೀಡುವುದಾಗಿಯೂ ಭಾರತ ಘೋಷಿಸಿತ್ತು.

ಇದನ್ನೂ ಓದಿ:ಸೈನಿಕರ ‘ಗೃಹ’ಬಲ

ಈ ಎಲ್ಲ ಬೆಳವಣಿಗೆಗಳ ನಡುವೆ, ಭೂ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಗಳನ್ನು ವಿಯೆಟ್ನಾಂಗೆ ಮಾರಾಟ ಮಾಡಲು ಭಾರತ ಉದ್ದೇಶಿಸಿದೆ ಎಂದು2017ರ ಜನವರಿಯಲ್ಲಿ ವರದಿಯಾಗಿತ್ತು. ಇದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ ವಿಯೆಟ್ನಾಂಗೆ ಕ್ಷಿಪಣಿ ಮಾರಾಟ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಬೆದರಿಕೆಯನ್ನೂ ಒಡ್ಡಿತ್ತು. ಈ ಹಂತದಲ್ಲಿ ಭಾರತ–ಚೀನಾ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ಸಂಘರ್ಷದ ಪರಿಸ್ಥಿತಿ ತಲೆದೋರಿತ್ತು. ಆದಾಗ್ಯೂ ದಕ್ಷಿಣ ಚೀನಾ ಸಮುದ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಮಿತ್ರರಾಷ್ಟ್ರಗಳ ಜತೆಗಿನ ಬಾಂಧವ್ಯ ವೃದ್ಧಿ ವಿಚಾರದಲ್ಲಿ ಮುಂದೆಯೂ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ಭಾರತ ಹೇಳಿಕೊಂಡಿರುವುದು ಗಮನಾರ್ಹ.

ಇಡೀ ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳುಪ್ರಜಾವಾಣಿ ಜಾಲತಾಣದಲ್ಲಿನಿಮಗಾಗಿ...

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.