ನವದೆಹಲಿ : ‘ದೇಶದ ಭದ್ರತೆ ಮತ್ತು ಗಡಿ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗಡಿ ರಕ್ಷಣೆಗೆ ಬದ್ಧತೆ ತೋರಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಪೂರ್ವ ಲಡಾಖ್ ಬಳಿ ಅಂತರರಾಷ್ಟ್ರೀಯ ಗಡಿ ಸಮೀಪ ಪಾಂಗಾಂಗ್ ಸರೋವರಕ್ಕೆ ಚೀನಾವು ಎರಡನೇ ಸೇತುವೆಯನ್ನು ನಿರ್ಮಿಸಲು ಒತ್ತು ನೀಡಿದೆ ಎಂಬ ವರದಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಮೊದಲ ಸೇತುವೆ ನಿರ್ಮಾಣ ಕುರಿತ ವರದಿ ಬಂದಾಗ ‘ನಾವು ಪರಿಸ್ಥಿತಿ ಗಮನಿಸುತ್ತಿದ್ದೇವೆ’ ಎಂದು ಸರ್ಕಾರ ಹೇಳಿಕೆ ನೀಡಿತ್ತು. ಈಗಲೂ ಅದೇ ಹೇಳಿಕೆ ನೀಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಚೀನಾ ನಿರ್ಮಿಸುತ್ತಿದೆ ಎನ್ನಲಾದ ಸೇತುವೆಯು ಆ ದೇಶವು ಗಡಿಯುದ್ದಕ್ಕೂ ಕ್ಷಿಪ್ರಗತಿಯಲ್ಲಿ ತನ್ನ ಸೇನೆಯನ್ನು ಕ್ರೋಡೀಕರಿಸಲು ಸಹಾಯಕವಾಗಲಿದೆ ಎಂದು ಉಪಗ್ರಹ ಚಿತ್ರಗಳನ್ನು ಆಧರಿಸಿ ಈ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.