ನವದೆಹಲಿ: ಸ್ವದೇಶಿ ತಂತ್ರಜ್ಞಾನ ಆಧಾರಿಸಿದ ಬುಲೆಟ್ ರೈಲು ಅಭಿವೃದ್ಧಿ ನಿರ್ಮಾಣದತ್ತ ಯೋಜನೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.
ಬುಲೆಟ್ ರೈಲು ಯೋಜನೆ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿದ ಅವರು, ‘ಮೊದಲ ಹಂತದಲ್ಲಿ ಅಹಮದಾಬಾದ್ ಹಾಗೂ ಮುಂಬೈ ನಡುವೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇದು ಅತ್ಯಂತ ಕ್ಲಿಷ್ಟಕರ ತಂತ್ರಜ್ಞಾನವಾಗಿದ್ದು, ಜಪಾನ್‌ನ ನೆರವಿನೊಂದಿಗೆ ಸಾಕಾರಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ’ ಎಂದಿದ್ದಾರೆ.
‘ಬುಲೆಟ್ ರೈಲು ಯೋಜನೆ ಎಂಬುದು ಅತ್ಯಂತ ಕ್ಲಿಷ್ಟಕರ ಹಾಗೂ ಉತ್ಕೃಷ್ಟ ತಂತ್ರಜ್ಞಾನ ಬೇಡುವ ಯೋಜನೆಯಾಗಿದೆ. ಗರಿಷ್ಠ ಮಟ್ಟದ ಸುರಕ್ಷತೆ ಹಾಗೂ ನಿರ್ವಹಣೆಯ ಅಗತ್ಯವನ್ನೂ ಪರಿಗಣಿಸಿ, ಜಪಾನ್‌ನ ತಂತ್ರಜ್ಞರ ಜತೆಗೂಡಿ ಈ ಯೋಜನೆಯ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ಭಾರತದ ಅಗತ್ಯಕ್ಕೆ ಹಾಗು ಇಲ್ಲಿನ ಹವಾಮಾನ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸಲಾಗಿದೆ. ಆರಂಭಿಕ ಹಂತದಲ್ಲಿ ಬುಲೆಟ್ ರೈಲು ತಂತ್ರಜ್ಞಾನವನ್ನು ಹೊರದೇಶಗಳಿಂದ ಪಡೆಯಬೇಕಾಗಿತ್ತು. ಆದರೆ ಈಗ ಭಾರತದಲ್ಲೇ ಇಂಥ ತಂತ್ರಜ್ಞಾನ ಲಭ್ಯ. ಹೀಗಾಗಿ ಆತ್ಮನಿರ್ಭರ ಮೂಲಕ ಸ್ವದೇಶಿ ಬುಲೆಟ್ ರೈಲನ್ನೇ ಅಭಿವೃದ್ಧಿಪಡಿಸಲಾಗುವುದು’ ಎಂದಿದ್ದಾರೆ.
‘ಈ ಎರಡೂ ನಗರಗಳ ನಡುವಿನ ಒಟ್ಟು ದೂರ 508 ಕಿ.ಮೀ. ಆಗಿದ್ದು, ಇದರಲ್ಲಿ 320 ಕಿ.ಮೀ. ಮಾರ್ಗದಲ್ಲಿನ ಕಾಮಗಾರಿ ಭರದಿಂದ ಸಾಗಿದೆ. ನಿರ್ಮಾಣ ಕಾಮಗಾರಿ, ಹಳಿ ಜೋಡಣೆ, ವಿದ್ಯುತ್ ಸಂಪರ್ಕ, ಸಿಗ್ನಲ್, ದೂರಸಂಪರ್ಕ ಹಾಗೂ ರೈಲು ಸಿದ್ಧಗೊಂಡ ನಂತರವಷ್ಟೇ ಯೋಜನೆ ಪೂರ್ಣಗೊಳ್ಳುವ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದಿದ್ದಾರೆ.
‘ಮಹಾರಾಷ್ಟ್ರದಲ್ಲಿ ಈ ಮೊದಲು ಕಾಮಗಾರಿ ಪ್ರಗತಿ ಕುಂಠಿತಗೊಂಡಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಲ್ಲಿ ರಚನೆಗೊಂಡ ನಂತರ, ಅಗತ್ಯ ಅನುಮತಿಗಳು ತ್ವರಿತವಾಗಿ ಲಭಿಸಿದ ಕಾರಣ ಈಗ ಅಲ್ಲಿಯೂ ಕಾಮಗಾರಿ ವೇಗ ಪಡೆದುಕೊಂಡಿದೆ. ಭಾರತದ ಮೊದಲ ಸಮುದ್ರಡಿಯ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಇದರ ದೂರ ಒಟ್ಟು 21 ಕಿ.ಮೀ.ನಷ್ಟಿದೆ’ ಎಂದು ವೈಷ್ಣವ್ ಹೇಳಿದ್ದಾರೆ.
ಮುಂಬೈ–ಅಹಮದಾಬಾದ್ ನಡುವೆ ಸದ್ಯ ಅತಿ ವೇಗದ ರೈಲು ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇದು ಗುಜರಾತ್, ಮಹಾರಾಷ್ಟ್ರ, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಹಾಗೂ ನಾಗರ್ ಹವೇಲಿ ಮೂಲಕ ಹಾದು ಹೋಗಲಿದೆ. ಒಟ್ಟು 12 ನಿಲ್ದಾಣಗಳು ಇರಲಿದ್ದು, ಮುಂಬೈ, ಥಾಣೆ, ವಿರಾರ್, ಬೊಯ್ಸಾರ್, ವಾಪಿ, ಬಿಲ್ಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಹಾಗೂ ಸಾಬರಮತಿ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.