ಮುಂಬೈ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಯುದ್ಧವಿಮಾನಗಳ ನೌಕಾವಾಹಕ ‘ಐಎನ್‌ಎಸ್ ವಿಕ್ರಾಂತ್’ ಗುರುವಾರ ಭಾರತೀಯ ನೌಕಾಪಡೆಯ ಭಾಗವಾದ ‘ವೆಸ್ಟರ್ನ್ ಫ್ಲೀಟ್’ಗೆ ಸೇರ್ಪಡೆಯಾಗಿದೆ.
‘ನೌಕಾಪಡೆಗೆ ಇದು ಮಹತ್ವದ ದಿನವಾಗಿದ್ದು, ಈ ಸೇರ್ಪಡೆ ನೌಕಾಪಡೆ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಿದೆ. ವೆಸ್ಟರ್ನ್ ಫ್ಲೀಟ್ ಮುಂಬೈನಲ್ಲಿ ಕೇಂದ್ರ ಕಚೇರಿಯುಳ್ಳ ಪಶ್ಚಿಮ ನೌಕಾ ಕಮಾಂಡ್‌ನ (ಡಬ್ಲ್ಯುಎನ್‌ಸಿ) ಭಾಗವಾಗಿದೆ.
‘ಐಎನ್‌ಎಸ್ ವಿಕ್ರಮಾದಿತ್ಯ ನಿರ್ವಹಣೆಯ ತಂಡದ ಸಾರಥ್ಯದಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕಾವಾಹಕದ ಸೇರ್ಪಡೆಯಾಯಿತು. ಇದನ್ನು ಬಳಸಿಕೊಂಡು ಅರಬ್ಬಿ ಸಮುದ್ರದಲ್ಲಿ ಜೋಡಿ ಯುದ್ಧ ವಿಮಾನಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ಎರಡೂ ನೌಕಾವಾಹಕಗಳು ಈ ಅರಬ್ಬಿ ಸಮುದ್ರದಲ್ಲಿ ನೆಲೆಗೊಂಡಿವೆ. ಕರ್ನಾಟಕದ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆ ವ್ಯಾಪ್ತಿಗೆ ಬರಲಿವೆ.
ಪ್ರಧಾನಿ ನರೇಂದ್ರ ಮೋದಿ ಸೆ. 2, 2022ರಂದು ‘ಐಎನ್‌ಎಸ್ ವಿಕ್ರಾಂತ್’ ಕಾರ್ಯಾಚರಣೆಗೊಳಿಸಿದ್ದರು. ನೌಕಾಪಡೆಯ ಯುದ್ಧವಾಹಕ ವಿನ್ಯಾಸ ಮಂಡಳಿ (ಡಬ್ಲ್ಯುಡಿಬಿ) ವಿನ್ಯಾಸಗೊಳಿಸಿದ್ದು, ಕೊಚ್ಚಿಯ ಸಿಎಸ್‌ಎಲ್ ಸಂಸ್ಥೆ ನಿರ್ಮಾಣ ಮಾಡಿದೆ.
‘ಐಎನ್‌ಎಸ್ ವಿಕ್ರಾಂತ್’ ಒಟ್ಟು 262.5 ಮೀಟರ್ ಉದ್ದ, 61.6 ಮೀಟರ್ ಅಗಲವಿದೆ. 43 ಸಾವಿರ ಟನ್ ತೂಕ ಹೊರುವ ಸಾಮರ್ಥ್ಯವಿದೆ. 2,200 ಕಂಪಾರ್ಟ್‌ಮೆಂಟ್‌ಗಳಿದ್ದು, 1,600 ಸಿಬ್ಬಂದಿಗೆ ಬಳಸಲು ರೂಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.