ನವದೆಹಲಿ: ಜ್ವಾಲಾಮುಖಿ ಸ್ಫೋಟದಿಂದ ಬಿಸಿ ಬೂದಿಯು ಮೋಡದಂತೆ ಆವರಿಸಿರುವುದರಿಂದ ಇಂಡೋನೇಷ್ಯಾದ ಬಾಲಿಗೆ ತೆರಳಬೇಕಿದ್ದ ಇಂಡಿಗೊ ಮತ್ತು ಏರ್ ಇಂಡಿಯಾ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ.
ಕಳೆದೊಂದು ವಾರದಿಂದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಉಕ್ಕಿ ಹರಿಯುತ್ತಿದ್ದು, ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಲಾಗಿತ್ತು.
ಜ್ವಾಲಾಮುಖಿಯ ಬೂದಿ ಗಾಳಿಯೊಂದಿಗೆ ವ್ಯಾಪಿಸಿದ್ದು, ಮೋಡಗಳಾಗಿ ಪರಿವರ್ತನೆಗೊಂಡಿದೆ. ಈ ಮೋಡಗಳು ವಿಮಾನಗಳ ಕಾರ್ಯಾಚರಣೆಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಹಲವು ವಿಮಾನಯಾನ ಸಂಸ್ಥೆಗಳು ಬಾಲಿಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರಯಾಣಿಕರ ಗಮನಕ್ಕೆ... ಇಂಡೋನೇಷ್ಯಾದ ಬಾಲಿಯಲ್ಲಿ ಈಚೆಗೆ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದಾಗಿ ಬೂದಿ ಮೋಡಗಳು ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದಾದ್ದರಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ’ ಎಂದು ಇಂಡಿಗೊ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಇಂಡಿಗೊ ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಬಾಲಿಗೆ ವಿಮಾನಗಳ ಹಾರಾಟ ನಡೆಸುತ್ತಿದೆ.
ಇತ್ತ ಏರ್ ಇಂಡಿಯಾವು ಕೂಡಾ ಇಂಡೋನೇಷ್ಯಾದ ಬಾಲಿಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏರ್ ಇಂಡಿಯಾ ಸಂಸ್ಥೆಯು ದೆಹಲಿಯಿಂದ ಇಂಡೋನೇಷ್ಯಾಕ್ಕೆ ವಿಮಾನ ಹಾರಾಟ ನಡೆಸುತ್ತಿದೆ. ಈಗ ಏರ್ ಇಂಡಿಯಾದೊಂದಿಗೆ ವಿಲೀನಗೊಂಡಿರುವ ವಿಸ್ತಾರಾ ಈ ಸೇವೆಯನ್ನು ನಿರ್ವಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.