ಬೆಂಗಳೂರು: ಕೋಲ್ಕತ್ತ – ಗುವಾಹಟಿ ನಡುವೆ ವಿಮಾನ ಪ್ರಯಾಣದ ವೇಳೆ ₹ 45 ಸಾವಿರ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರೊಬ್ಬರಿಗೆ ಇಂಡಿಗೊ ಏರ್‌ಲೈನ್ಸ್ ಕೇವಲ ₹2,450 ಪರಿಹಾರ ನೀಡಿದೆ.
ಅಸ್ಸಾಂನ ಮೊನಿಕ್ ಶರ್ಮಾ ಬ್ಯಾಗ್ ಕಳೆದುಕೊಂಡಿದ್ದು, ಅವರ ಸ್ನೇಹಿತ ರವಿ ಹಂಡಾ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಏರ್‌ಲೈನ್ಸ್‌ನ ನಡವಳಿಕೆಗೆ ಟೀಕೆ ವ್ಯಕ್ತವಾಗಿದೆ.
ಒಂದು ತಿಂಗಳ ಹಿಂದೆ ಬ್ಯಾಗ್ ಕಳೆದುಹೋಗಿದ್ದು, ಅದರಲ್ಲಿ ಚಾಲನಾ ಪರವಾನಗಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಹಿತ ₹ 45 ಸಾವಿರ ಮೌಲ್ಯದ ವಸ್ತುಗಳಿದ್ದವು ಎಂದು ಅವರು ಹೇಳಿದ್ದಾರೆ.
‘ಬ್ಯಾಗ್‌ನ ಬಗ್ಗೆ ಕೋಲ್ಕತ್ತ ಏರ್‌ಪೋರ್ಟ್‌ನಲ್ಲಿ ವಿಚಾರಿಸಲಾಯಿತು. ಆದರೆ ಗುವಾಹಟಿಗೆ ತಲುಪಿರುವ ಬಗ್ಗೆ ಯಾವುದೇ ಮಾಹಿತಿ ಅಲ್ಲಿರಲಿಲ್ಲ. ದಾರಿ ಮಧ್ಯೆ ಆಕಾಶದಲ್ಲಿ ಬ್ಯಾಗ್ ಕಾಣೆಯಾಗಲು ಹೇಗೆ ಸಾಧ್ಯ? ಈಗ ಒಂದು ತಿಂಗಳ ಬಳಿಕ ₹ 2,450 ಪರಿಹಾರ ನೀಡುವುದಾಗಿ ಇಂಡಿಗೊ ಹೇಳಿದೆ. ಆದರೆ ಬ್ಯಾಗ್‌ನ ಮೌಲ್ಯವೇ ಅದಕ್ಕಿಂತ ಹೆಚ್ಚಿದೆ. ನಿಯಮದ ಪ್ರಕಾರ ಏರ್‌ಲೈನ್ ಪ್ರತಿ ಕೆ.ಜಿಗೆ ಗರಿಷ್ಠ ₹ 350 ಪರಿಹಾರ ನೀಡಬೇಕು ಎನ್ನುವ ನಿಯಮವಿದೆ. ಏರ್‌ಲೈನ್ಸ್‌ನ ಈ ನಡೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇಂಡಿಗೊವನ್ನು ಟ್ಯಾಗ್ ಮಾಡಿ ಹಲವು ಬಳಕೆದಾರರು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
‘ಮೈಕ್ರೋಸಾಫ್ಟ್ ವಿಂಡೋಸ್ ತಾಂತ್ರಿಕ ದೋಷದ ವೇಳೆ ಈ ಘಟನೆ ನಡೆದಿರಬಹುದು’ ಎಂದು ಓರ್ವ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಇಂಡಿಗೊ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ, ಸ್ನೇಹಿತನ ಬೋರ್ಡಿಂಗ್ ಪಾಸ್‌ನ ಚಿತ್ರ ಹಂಚಿಕೊಂಡು ಸಹಾಯ ಮಾಡಿ ಎಂದು ರವಿ ಕೋರಿಕೊಂಡಿದ್ದಾರೆ. ಅಲ್ಲದೆ ನೀಡಲಾದ ಪರಿಹಾರ ಕೂಡ ಸಮರ್ಪಕವಾಗಿಲ್ಲ ಎಂದು ಹೇಳಿದ್ದಾರೆ.
ಇದಾದ ಬಳಿಕ ಲಗೇಜ್ ಲಭಿಸಿದೆಯೇ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಇಂಡಿಗೊದ ಸಾಮಾಜಿಕ ಜಾಲತಾಣ ವಿಭಾಗ ಅವರಿಗೆ ಕರೆ ಮಾಡಿ, ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾಗಿ ರವಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.