ADVERTISEMENT

ಬೆಳೆ ಪರಿಹಾರಕ್ಕೆ ಕನ್ನ; 3 ವರ್ಷಗಳಲ್ಲಿ ₹ 5 ಕೋಟಿ ಲಪಟಾಯಿಸಿದ ಇಂದೋರ್ ಕ್ಲರ್ಕ್

ಐಎಎನ್ಎಸ್
Published 24 ಮಾರ್ಚ್ 2023, 13:57 IST
Last Updated 24 ಮಾರ್ಚ್ 2023, 13:57 IST
   

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗುಮಾಸ್ತ ಕೇವಲ 3 ವರ್ಷ ಅವಧಿಯಲ್ಲಿ ₹ 5 ಕೋಟಿ ಲಪಟಾಯಿಸಿ, ಸಂಬಂಧಿಕರ ಖಾತೆಗಳಿಗೆ ವರ್ಗವಾಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗುಮಾಸ್ತನನ್ನು ಮಿಲಪ್‌ ಸಿಂಗ್‌ ಚೌಹಾಣ್‌ ಎಂದು ಗುರುತಿಸಲಾಗಿದೆ. ಆತನಿಗೆ ಅಮಿತ್‌ ನಿಂಬಾಳ್ಕರ್‌ ಮತ್ತು ರಂಜಿತ್‌ ಕಿರೋಡೆ ಎಂಬ ಇನ್ನಿಬ್ಬರು ನೌಕರರು ನೆರವಾಗಿದ್ದಾರೆ. ಕೀಟಬಾಧೆ ಅಥವಾ ಇತರ ಕಾರಣಗಳಿಂದ ಹಾಳಾದ ರೈತರ ಬೆಳೆ ಪರಿಹಾರಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಆರೋಪಿಗಳು ತಮ್ಮ ಪತ್ನಿಯರು ಹಾಗೂ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವುದಲ್ಲದೆ, ಭಾರಿ ಹಣವನ್ನು ಕಾಲ್‌ ಗರ್ಲ್ಸ್‌ ಹಾಗೂ ಬಾರ್‌ ಖರ್ಚಿಗೆ ಬಳಸಿದ್ದಾರೆ.

ADVERTISEMENT

ಜಿಲ್ಲಾಧಿಕಾರಿ ಇಳೈ ರಾಜ ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜೇಶ್‌ ರಾಥೋರ್‌ ಮತ್ತು ಅವರ ತಂಡ ಸರ್ಕಾರದ ಅನುದಾನದಲ್ಲಿ ₹ 5 ಕೋಟಿಗೂ ಹೆಚ್ಚು ಕಳುವಾಗಿರುವುದನ್ನು ಗಮನಿಸಿದ್ದಾರೆ. ತನಿಖೆ ವೇಳೆ, ಸಿಬ್ಬಂದಿಯ ಬ್ಯಾಂಕ್‌ ವಿವರಗಳನ್ನೂ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ರವೋಜಿ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 29 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ. ಚೌಹಾಣ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.