ಇಂದೋರ್ : ಪಾಲಿಕೆಯ ಕಾರ್ಯಕ್ರಮಗಳು ಹಾಗೂ ಪತ್ರ ವ್ಯವಹಾರದಲ್ಲಿ ಇಂಡಿಯಾ ಬದಲಿಗೆ ‘ಭಾರತ’ ಎಂದು ಹೆಸರು ಬಳಸುವುದಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆಯ ಮೇಯರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯು ಒಪ್ಪಿಗೆ ನೀಡಿದೆ.
ಮೇಯರ್ ಪುಷ್ಯಮಿತ್ರ ಭಾರ್ಗವ ಅವರು ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದಾರೆ. ಪಾಲಿಕೆಯಲ್ಲಿ ಒಟ್ಟು 85 ಸದಸ್ಯರಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾವ ಮಂಡಿಸಲಿದ್ದು ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇಂಡಿಯಾ ಹೆಸರು ಬ್ರಿಟಿಷರ ಬಳುವಳಿಯಾಗಿದೆ. ‘ಭಾರತ’ ಎಂದು ಸಂಬೋಧಿಸುವುದು ನಮ್ಮ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಪರಂಪರೆಯನ್ನು ಬಿಂಬಿಸುತ್ತದೆ. ಸಂವಿಧಾನದಲ್ಲಿಯೂ ದೇಶದ ಹೆಸರನ್ನು ‘ಭಾರತ’ವೆಂದು ಉಲ್ಲೇಖಿಸಲಾಗಿದೆ’ ಎಂದು ಭಾರ್ಗವ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೇಶಗಳ ನಾಯಕರಿಗೆ ಆಯೋಜಿಸಿದ್ದ ಭೋಜನ ಕೂಟದ ಆಹ್ವಾನ ಪತ್ರಿಕೆಯಲ್ಲಿ ’ಪ್ರೆಸಿಡೆಂಟ್ ಆಫ್ ಭಾರತ್‘ ಎಂದು ಉಲ್ಲೇಖಿಸಿದ್ದರಿಂದ ಇಂಡಿಯಾ ಹೆಸರನ್ನು ಭಾರತವೆಂದು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಊಹಾಪೋಹ ಹಬ್ಬಿತ್ತು. ಇದು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.