ADVERTISEMENT

‘ನಿರುದ್ಯೋಗಿ’ ಪತಿಗೆ ಜೀವನಾಂಶ ನೀಡಲು ಪತ್ನಿಗೆ ಕೌಟುಂಬಿಕ ನ್ಯಾಯಾಲಯ ಸೂಚನೆ

ಪಿಟಿಐ
Published 22 ಫೆಬ್ರುವರಿ 2024, 20:44 IST
Last Updated 22 ಫೆಬ್ರುವರಿ 2024, 20:44 IST
-
-   

ಇಂದೋರ್‌(ಮಧ್ಯಪ್ರದೇಶ): ‘ನಿರುದ್ಯೋಗಿ’ ಪತಿಗೆ ಪ್ರತಿ ತಿಂಗಳು ₹5 ಸಾವಿರ ಜೀವನಾಂಶ ನೀಡುವಂತೆ ಬ್ಯೂಟಿ ಪಾರ್ಲರ್‌ ನಡೆಸುತ್ತಿರುವ ಆತನ ಪತ್ನಿಗೆ ಇಲ್ಲಿನ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.

‘ನಾವು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿರುವ ಕೌಟುಂಬಿಕ ನ್ಯಾಯಾಲಯ ಈ ಕುರಿತು ಫೆ.20ರಂದು ಆದೇಶ ಹೊರಡಿಸಿದ್ದು, ಜೀವನಾಂಶವಲ್ಲದೇ, ವ್ಯಾಜ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನೂ ನೀಡುವಂತೆ ನ್ಯಾಯಾಲಯ ಸೂಚಿಸಿದೆ’ ಎಂದು ಪತಿ ಪರ ವಾದ ಮಂಡಿಸಿದ್ದ ವಕೀಲ ಮನೀಷ್‌ ಝರೋಲಾ ಗುರುವಾರ ತಿಳಿಸಿದ್ದಾರೆ.

‘ಪತ್ನಿ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ ಕಾರಣ, ದ್ವಿತೀಯ ಪಿಯು ನಂತರ ನನ್ನ ಕಕ್ಷಿದಾರನಿಗೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ನಿರುದ್ಯೋಗಿಯಾಗಿರುವ ಕಾರಣ ನನ್ನ ಕಕ್ಷಿದಾರನಿಗೆ ಜೀವನಾಂಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ’ ಎಂದು ಝರೋಲಾ ತಿಳಿಸಿದ್ದಾರೆ.

ADVERTISEMENT

‘ಮಹಿಳೆಯನ್ನು ಮದುವೆಯಾಗುವುದಕ್ಕೆ ನನ್ನ ಕಕ್ಷಿದಾರ ಸಿದ್ಧನಿರಲಿಲ್ಲ. ಆದರೆ, ಆಕೆಯ ಕುಟುಂಬ ಸದಸ್ಯರು ಬೆದರಿಕೆ ಒಡ್ಡಿದ್ದರಿಂದ, 2022ರಲ್ಲಿ ಆರ್ಯ ಸಮಾಜ ದೇಗುಲದಲ್ಲಿ ಆಕೆಯನ್ನು ಮದುವೆಯಾದ. ಕೆಲವೇ ದಿನಗಳಲ್ಲಿ ಇಬ್ಬರು ಪ್ರತ್ಯೇಕವಾದರು’ ಎಂದು ವಿವರಿಸಿದ್ದಾರೆ.

‘ಜೀವನಾಂಶ ಕೋರಿ ಅರ್ಜಿ ಸಲ್ಲಿಸಿರುವುದಕ್ಕೆ ಪ್ರತೀಕಾರವಾಗಿ, ಮಹಿಳೆ ಕೂಡ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮ ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸುವಂತೆ ಕೋರಿದ್ದಾರೆ. ಅಲ್ಲದೇ, ಕೌಟುಂಬಿಕ ಹಿಂಸೆ ಆರೋಪ ಮಾಡಿರುವ ಮಹಿಳೆ, ಈ ಕುರಿತು ನನ್ನ ಕಕ್ಷಿದಾರನ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ’ ಎಂದೂ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.