ನವದೆಹಲಿ: ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸೆರೆಹಿಡಿಯಲು ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಅವರು ನ್ಯಾಯಾಧೀಶರ ಎದುರು ನೀಡಿದ್ದ ಹೇಳಿಕೆಯನ್ನೇ ಸಿಬಿಐ ಅಧಿಕಾರಿಗಳು ಆಧಾರವಾಗಿ ಇಟ್ಟುಕೊಂಡಿದ್ದಾರೆ.
ಇಂದ್ರಾಣಿ ಕಳೆದ ವರ್ಷ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆ ದಾಖಲಿಸಿದ್ದರು. ತಾವು ಹಾಗೂ ತಮ್ಮ ಮಾಜಿ ಪತಿ ಪೀಟರ್ ಜೊತೆಗೂಡಿ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಭೇಟಿಯಾಗಿದ್ದೆವು ಅಂದು ಇಂದ್ರಾಣಿ ಹೇಳಿಕೆ ಕೊಟ್ಟಿದ್ದರು. ಚಿದಂಬರಂ ಅವರು ತಮ್ಮ ಪುತ್ರನ ವ್ಯವಹಾರಕ್ಕೆ ಸಹಕಾರ ನೀಡುವಂತೆ ಕೋರಿದ್ದರು. ಹೀಗಾಗಿ ತಾವು, ಪೀಟರ್ ಹಾಗೂ ಚಿದಂಬರಂ ಅವರ ಪುತ್ರ ಕಾರ್ತಿ ಹಯಾತ್ ಹೋಟೆಲ್‌ನಲ್ಲಿ ಭೇಟಿಯಾಗಿದ್ದನ್ನು ಇಂದ್ರಾಣಿ ಪ್ರಸ್ತಾಪಿಸಿದ್ದರು. ಇದೇ ಸಭೆಯಲ್ಲೇ ₹7 ಕೋಟಿ (10 ಲಕ್ಷ ಡಾಲರ್) ಹಣಕ್ಕೆ ಬೇಡಿಕೆ ಇಡಲಾಗಿತ್ತು.
ಈ ಎಲ್ಲ ಆರೋಪಗಳನ್ನು ಚಿದಂಬರಂ ಹಾಗೂ ಕಾರ್ತಿ ಇಬ್ಬರೂ ಸ್ಪಷ್ಟವಾಗಿ ತಳ್ಳಿಹಾಕಿದ್ದರು.
ಸಿಆರ್‌ಪಿಸಿಯ ವಿವಿಧ ಕಲಂಗಳ ಅಡಿ ನ್ಯಾಯಾಧೀಶರ ಎದುರು ಇಂದ್ರಾಣಿ ಹೇಳಿಕೆ ನೀಡಿರುವುದರಿಂದ ಅವರ ಮಾತುಗಳಿಗೆ ಮಹತ್ವವಿದೆ ಎನ್ನುತ್ತಾರೆ ತನಿಖಾಧಿಕಾರಿಗಳು.
ಮಗಳು ಶೀನಾಬೋರಾ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ಇಂದ್ರಾಣಿ ಮುಖರ್ಜಿ ಅವರು ಐಎನ್‌ಎಕ್ಸ್ ಪ್ರಕರಣದಲ್ಲಿ ಮಾಫಿಸಾಕ್ಷಿಯಾಗಿದ್ದಾರೆ. ಚಿದಂಬರಂ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಇಂದ್ರಾಣಿ ಅವರನ್ನು ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾರ್ತಿ ಅವರನ್ನು ಸಿಬಿಐ ಕಳೆದ ವರ್ಷ ಬಂಧಿಸಿತ್ತು. ಇಂದ್ರಾಣಿ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಇಂದ್ರಾಣಿ ಹಾಗೂ ಕಾರ್ತಿ ಅವರನ್ನು ಮುಖಾಮುಖಿಯಾಗಿಸಲು ಸಿಬಿಐ ಬಯಸಿತ್ತು. ಬೈಕುಲ್ಲಾ ಕಾರಾಗೃಹದಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.