ADVERTISEMENT

ರಕ್ಷಣಾ ಇಲಾಖೆಯಲ್ಲಿ ‘ಲಿಂಗ ಸಮಾನತೆʼಯತ್ತ ಮೊದಲ ಹೆಜ್ಜೆ: ನರವಣೆ

ಎನ್‌ಡಿಎ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ

ಪಿಟಿಐ
Published 29 ಅಕ್ಟೋಬರ್ 2021, 10:04 IST
Last Updated 29 ಅಕ್ಟೋಬರ್ 2021, 10:04 IST
ಸೇನಾ ಮುಖ್ಯಸ್ಥ ಎಂ.ಎಂ. ನರವಣೆ
ಸೇನಾ ಮುಖ್ಯಸ್ಥ ಎಂ.ಎಂ. ನರವಣೆ   

ಪುಣೆ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಸೇರ್ಪಡೆಗೆ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ರಕ್ಷಣಾ ಇಲಾಖೆ ‘ಲಿಂಗ ಸಮಾನತೆ‘ಯತ್ತ ಮೊದಲ ಹೆಜ್ಜೆ ಇಟ್ಟಿದ್ದು, ನ್ಯಾಯಸಮ್ಮತ ಮತ್ತು ವೃತ್ತಿಪರತೆಯಿಂದ ಕಲಿಕೆಯ ಮೂಲಕ ಅವರನ್ನು ಸ್ವಾಗತಿಸುತ್ತಿದ್ದೇವೆ‘ ಎಂದು ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ತಿಳಿಸಿದರು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 141ನೇ ಕೋರ್ಸ್‌ ಪಾಸಾದ ಕೆಡೆಟ್‌ಗಳ ಪರೇಡ್‌ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ರಕ್ಷಣಾ ಕ್ಷೇತ್ರ ಪ್ರವೇಶಿಸುವ ಮೂಲಕ ಬಲವರ್ಧನೆಗೊಳ್ಳುತ್ತಿದ್ದಾರೆ ಎಂದು ಹೇಳಿದರು.

‘ಎನ್‌ಡಿಎಗೆ ಮಹಿಳಾ ಅಭ್ಯರ್ಥಿಗಳ ಪ್ರವೇಶ ಆರಂಭವಾದ ಮೇಲೆ, ಭಾರತೀಯ ಸಶಸ್ತ್ರಪಡೆಗಳು ಅವರೆಲ್ಲರನ್ನೂ ನ್ಯಾಯಸಮ್ಮತ ಮತ್ತು ವೃತ್ತಿಪರತೆಯೊಂದಿಗೆ ಸ್ವಾಗತಿಸುತ್ತೀರಿ ಎಂದು ನಿರೀಕ್ಷಿಸುತ್ತೇವೆ‘ ಎಂದು ನರವಣೆ ಹೇಳಿದರು.

ADVERTISEMENT

ಕಳೆದ ಸೆಪ್ಟೆಂಬರ್‌ನಲ್ಲಿರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಹಾಗೂ ನೌಕಾ ಅಕಾಡೆಮಿ ಪ್ರವೇಶ ಪರೀಕ್ಷೆ ಬರೆಯಲು ಅವಿವಾಹಿತ ಮಹಿಳೆಯರಿಗೆ ಅನುಮತಿ ದೊರೆತಿದೆ. ನವೆಂಬರ್‌ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಮುಂದಿನ ವರ್ಷ ಮೇ ತಿಂಗಳ ನಂತರ ಪ್ರವೇಶಾವಕಾಶ ಆರಂಭವಾಗುತ್ತದೆ.

ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ನರವಣೆ, ‘ಮಹಿಳೆಯರು ಎನ್‌ಡಿಎಗೆ ಸೇರ್ಪಡೆಗೊಂಡ ನಂತರ, ಪುರುಷರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ‘ ಎಂದು ಹೇಳಿದರು.

‘ವರ್ಷಗಳು ಉರುಳಿದಂತೆ ನಾವು ಬೆಳೆಯುತ್ತೇವೆ, ಪ್ರಬುದ್ಧರಾಗುತ್ತೇವೆ. ಹಾಗೆಯೇ, ಪಠ್ಯಕ್ರಮ ಬದಲಾದಂತೆ ತರಬೇತಿಯ ವಿಧಾನವೂ ಬದಲಾಗಿದೆ. ಕೋರ್ಸ್‌ನಲ್ಲಿನ ವಿಷಯಗಳೂ ಪರಿಷ್ಕರಣೆಯಾಗಿವೆ. ನಾವು ಹೆಚ್ಚು ಕಲಿತಿದ್ದೇವೆ, ಸುಸಜ್ಜಿತರಾಗಿದ್ದೇವೆ. ಎಂಥ ಸವಾಲುಗಳನ್ನು ಎದುರಿಸಲು ಸಿದ್ದರಾಗಿದ್ದೇವೆ‘ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.